December 19, 2025

ಉತ್ತಮ ಭವಿಷ್ಯ ರೂಪಿಸಲು ಶಿಸ್ತು, ಶ್ರದ್ಧೆ, ಛಲ, ಸಮಯ ಪ್ರಜ್ಞೆಯನ್ನು ಮೈಗೂಡಿಸಿ: ರೆ. ಫಾ. ರಿಚಾರ್ಡ್ ಅಲೋಶಿಯಸ್ ಕುವೆಲ್ಹೋ
ಫಾ.ಮು. ನರ್ಸಿಂಗ್ ಕಾಲೇಜಿನ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭ

0
image_editor_output_image-1623583135-1704998416696

ಬಂಟ್ವಾಳ: ವಿದ್ಯಾರ್ಥಿ ಜೀವನದಲ್ಲೇ ಶಿಸ್ತು, ಶ್ರದ್ಧೆ, ಛಲ, ಸಮಯ ಪ್ರಜ್ಞೆಯನ್ನು ಮೈಗೂಡಿಸಿದಾಗ ಉತ್ತಮ ಭವಿಷ್ಯವನ್ನು ರೂಪಿಸಲು ಸಾಧ್ಯವಾಗುತ್ತದೆ ಎಂದು ಫಾದರ್ ಮುಲ್ಲರ್ ಚಾರಿಟೆಬಲ್ ಇನ್‌ಸ್ಟಿಟ್ಯೂಟ್‌ಗಳ ನಿರ್ದೇಶಕ ರೆ. ಫಾ. ರಿಚಾರ್ಡ್ ಅಲೋಶಿಯಸ್ ಕುವೆಲ್ಹೋ ಹೇಳಿದರು.

ತುಂಬೆ ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜಿನಲ್ಲಿ ಗುರುವಾರ ನಡೆದ 2ನೇ ಬ್ಯಾಚ್ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳ ದೀಪ ಬೆಳಗಿಸಿ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸಕ್ತ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಮತ್ತು ಉತ್ತಮ ವಿದ್ಯಾರ್ಜನೆಗೆ ಸಾಕಷ್ಟು ಅವಕಾಶಗಳು ಇವೆ. ಆದರೆ ಹೆಚ್ಚಿನ ವಿದ್ಯಾರ್ಥಿಗಳು ಅವಕಾಶವನ್ನು ಪರಿಪೂರ್ಣವಾಗಿ ಬಳಸುತ್ತಿರುವುದು ಕಾಣುತ್ತಿಲ್ಲ. ಉದಾಸಿನತೆ, ಅತಿಯಾದ ನಿದ್ದೆ, ಅನಗತ್ಯವಾದ ತಂತ್ರಜ್ಞಾನ ಬಳಕೆ, ಸಮಯದ ಮಹತ್ವ ಅರಿಯದಿರುವುದರಿಂದ ಹೆಚ್ಚಿನ ವಿದ್ಯಾರ್ಥಿಗಳು ಸಫಲತೆ ಕಾಣಲು ವಿಫಲರಾಗುತ್ತಾರೆ. ಶಿಸ್ತು, ಶ್ರದ್ಧೆ, ಛಲ, ಸಮಯ ಪ್ರಜ್ಞೆಯನ್ನು ಮೈಗೂಡಿಸಿದಾಗ ಉತ್ತಮ ವಿದ್ಯಾರ್ಜನೆಯೊಂದಿಗೆ ಜೀವನದಲ್ಲಿ ಸಫಲತೆ ಕಾಣಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ವಿದ್ಯಾರ್ಥಿಗಳು ಹೆಚ್ಚಿನ ಜವಾಬ್ದಾರಿಯನ್ನು ಮೈಗೂಡಿಸಬೇಕು. ಇಂದು ಬೆಳಗಿಸಿದ ದೀಪ ಎಂದಿಗೂ ನಂದದಿರಲಿ ಎಂದು ನಾವು ಹಾರೈಸುತ್ತೇವೆ. ಇಂದು ಬೆಳಗಿಸಿದ ದೀಪ ನಿಮ್ಮ ಜೀವನವನ್ನು ಬೆಳಗಿಸಲಿ. ಈ ಸಂಸ್ಥೆಯಲ್ಲಿ ನೀವು ಕಲಿತ ವಿದ್ಯೆ ನಿಮ್ಮ ಜೀವನವನ್ನು ಬೆಳಗಿಸಬೇಕು. ನೀವು ಶಿಸ್ತು, ಶ್ರದ್ಧೆ, ಛಲದಿಂದ ಕಲಿತಾಗ ನೀವು ಉತ್ತಮ ನರ್ಸ್ ಗಳಾಗಿ ಮಾರ್ಪಡುತ್ತೀರಿ. ನೀವು ಉತ್ತಮ ನರ್ಸ್ ಗಳಾದರೆ ನೀವು ಶುಶ್ರೂಷೆ ನೀಡುವ ರೋಗಿಗಳು ಬೇಗನೆ ಗುಣಮುಖರಾಗುತ್ತಾರೆ. ಇದರಿಂದ ನೀವು ದೇವರ ಅನುಗ್ರಹವನ್ನು ಪಡೆಯುತ್ತೀರಿ. ರೋಗಿಗಳನ್ನು ಪ್ರೀತಿಸಿ, ಹೆತ್ತವರನ್ನು, ಶಿಕ್ಷಕರನ್ನು ಗೌರವಿಸಿದಾಗ ನೀವು ಜೀವನದಲ್ಲಿ ಯಶಸ್ಸು ಕಾಣುತ್ತೀರಿ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಫಾದರ್ ಮುಲ್ಲರ್ ಶಾಲೆ ಮತ್ತು ನರ್ಸಿಂಗ್ ಕಾಲೇಜು ಮಂಗಳೂರು ಇದರ ಪ್ರಾಂಶುಪಾಲೆ ಭಗಿನಿ ಜೆಸಿಂತಾ ಡಿಸೋಜ ಮಾತನಾಡಿದರು. ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜು ತುಂಬೆ ಇದರ ಪ್ರಾಂಶುಪಾಲೆ ಭಗಿನಿ ಡಾ. ಜೂಡಿ ಮಾತನಾಡಿ, ಫಾದರ್ ಮುಲ್ಲರ್ ಸಂಸ್ಥೆಯ ಕುರಿತು ವಿದ್ಯಾರ್ಥಿಗಳಿಗೆ ಪರಿಚಯಿಸಿದರು. ಫಾದರ್ ಮುಲ್ಲರ್ ಆಸ್ಪತ್ರೆ ತುಂಬೆ ಇದರ ವೈದ್ಯಾಧಿಕಾರಿ ಡಾ. ಕಿರಣ್ ಶೆಟ್ಟಿ, ಸಿಸ್ಟರ್ ಧನ್ಯ ದೇವಸ್ಯ ಉಪಸ್ಥಿತರಿದ್ದರು.

ಫಾದರ್ ಮುಲ್ಲರ್ ಆಸ್ಪತ್ರೆ ಮತ್ತು ನರ್ಸಿಂಗ್ ಕಾಲೇಜು ತುಂಬೆ ಇದರ ಆಡಳಿತಾಧಿಕಾರಿ ರೆ. ಫಾ. ಸಿಲ್ವೆಸ್ಟರ್ ವಿನ್ಸೆಂಟ್ ಲೋಬೋ ಅವರು ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜು ತುಂಬೆ ಇದರ ಉಪ ಪ್ರಾಂಶುಪಾಲೆ ಜಾನೆಟ್ ಸಿಕ್ವೇರಾ ಧನ್ಯವಾದಗೈದರು. ಸಿಸ್ಟರ್ ನಾನ್ಸಿ ಮತಾಯಸ್ ಕಾರ್ಯಕ್ರಮವನ್ನು ನಿರೂಪಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!