September 20, 2024

ಉಡುಪಿಯ ಅಷ್ಟ ಮಠಗಳ ಪರ್ಯಾಯ ಮಹೋತ್ಸವಕ್ಕೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ

0

ಬೆಂಗಳೂರು: ಉಡುಪಿಯ ಅಷ್ಟ ಮಠಗಳ ಪರ್ಯಾಯ ಮಹೋತ್ಸವಕ್ಕೆ ತಡೆ ನೀಡಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.

ಈ ಬಾರಿಯ ಪರ್ಯಾಯ ಪೀಠವನ್ನು ಪುತ್ತಿಗೆ ಶ್ರೀಗಳು ನಿರ್ವಹಿಸಲಿದ್ದಾರೆ. ಅವರು ಸಮುದ್ರೋಲ್ಲಂಘನೆ ಮಾಡಿ ವಿದೇಶಕ್ಕೆ ಪ್ರಯಾಣಿಸಿ ಸಂಪ್ರದಾಯ ಉಲ್ಲಂಘಿಸಿದ ಕಾರಣ ಅವರಿಗೆ ಪರ್ಯಾಯ ನೀಡದಂತೆ ಕೋರಿ ಗುರುರಾಜ ಜೀವನರಾವ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ಕುರಿತು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ, ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್‌ರಿದ್ದ ಪೀಠ, ವಿದೇಶದಲ್ಲಿ ಜ್ಞಾನ ಪ್ರಸಾರ ಮಾಡಿದರೆ ತಪ್ಪೇನು ಎಂದು ಪ್ರಶ್ನಿಸಿದೆ.

ರಾಷ್ಟ್ರಕವಿ ಕುವೆಂಪು ಅವರ ಕವಿತೆ ‘ಓ ನನ್ನ ಚೇತನ, ಆಗು ನೀ ಅನಿಕೇತನ’ ಕವಿತೆ ಉಲ್ಲೇಖಿಸಿದ ನ್ಯಾಯಪೀಠ, ಮನೆ ಕಟ್ಟಿ ಕೂರುವುದಕ್ಕಿಂತ ಹೊರಗೆ ಓಡಾಡುವುದು ಲೇಸು. ಧಾರ್ಮಿಕ ಆಚರಣೆ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿ, ಅರ್ಜಿಯನ್ನು ವಜಾಗೊಳಿಸಿದೆ.

2008ರಲ್ಲಿ ಕೂಡ ಪುತ್ತಿಗೆ ಶ್ರೀಗಳ ಪರ್ಯಾಯ ಪೀಠಾರೋಹಣಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಅಷ್ಟ ಮಠಗಳ ಪೈಕಿ ಆರು ಮಠಗಳ ಮಠಾಧೀಶರು ಪರ್ಯಾಯದಿಂದ ಅಂತರ ಕಾಯ್ದುಕೊಂಡಿದ್ದರು. ಆದರೆ, ಶೀರೂರು ಶ್ರೀಗಳು ಮಾತ್ರ ಪುತ್ತಿಗೆ ಶ್ರೀಗಳ ಪರ್ಯಾಯ ಪೀಠಾರೋಹಣಕ್ಕೆ ಬೆಂಬಲ ಸೂಚಿಸಿದ್ದರು.

Leave a Reply

Your email address will not be published. Required fields are marked *

error: Content is protected !!