KSRTC ಬಸ್ ನಿಲ್ದಾಣದಲ್ಲಿ ಹೆಣ್ಣು ಮಗುವನ್ನು ಬಿಟ್ಟು ಹೋದ ತಾಯಿ
ಗುಂಡ್ಲುಪೇಟೆ: ಪಟ್ಟಣದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಡಿ.20ರಂದು ಬಿಟ್ಟು ಹೋಗಿದ್ದ ಹೆಣ್ಣು ಮಗುವಿನ ಗುರುತು ಪತ್ತೆಯಾಗಿದೆ.
ಭಾನುವಾರ ಹಾಸನದಿಂದ ಬಂದಿದ್ದ ತಂದೆ, ಮಗು ಆಶ್ರಯ ಪಡೆದಿದ್ದ ಕೊಳ್ಳೇಗಾಲದ ಜೀವನ ಜ್ಯೋತಿ ಟ್ರಸ್ಟ್‌ಗೆ ಭೇಟಿ ನೀಡಿ ಮಗುವಿನ ದಾಖಲೆಗಳನ್ನು ಹಾಜರು ಪಡಿಸಿದರು.
ಮಗುವನ್ನು ಸೋಮವಾರ ಹಾಸನ ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಡಿ.20ರಂದು ಗುಂಡ್ಲುಪೇಟೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಕಲ್ಲೀಗೌಡನಹಳ್ಳಿಯ ಮಹದೇವಮ್ಮ ಅವರ ಬಳಿ ಮಗು ಕೊಟ್ಟು, ಶೌಚಾಲಯಕ್ಕೆ ಹೋಗಿ ಬರುವುದಾಗಿ ಹೇಳಿದವರು ವಾಪಸ್ ಆಗಿರಲಿಲ್ಲ.
ವಿಷಯ ತಿಳಿದು ಸ್ಥಳಕ್ಕೆ ಬಂದಿದ್ದ ಪೊಲೀಸರು ಮಗುವನ್ನು ವಶಕ್ಕೆ ಪಡೆದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯೊಂದಿಗೆ ಚರ್ಚಿಸಿದ ನಂತರ ಮಗುವನ್ನು ಸ್ಥಳೀಯ ಸಿಎಂಎಸ್ ಅನಾಥಾಲಯದಲ್ಲಿ ಇರಿಸಲಾಗಿತ್ತು. ನಂತರ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯವರು ಮಗುವನ್ನು ಕೊಳ್ಳೇಗಾಲ ತಾಲ್ಲೂಕಿನ ಜೀವನಜ್ಯೋತಿ ಟ್ರಸ್ಟ್‌ಗೆ ಹಸ್ತಾಂತರಿಸಿದ್ದರು.
ಬಾಲಕಿಯ ತಂದೆ ತಾಯಿ ಹಾಸನದವರು. ಕೌಟುಂಬಿಕ ಕಲಹದಿಂದಾಗಿ ಡಿ.2ರಂದು ತಾಯಿಯು ಮಗುವಿನೊಂದಿಗೆ ಮನೆ ಬಿಟ್ಟು ಬಂದಿದ್ದರು. ಈ ಸಂಬಂಧ ಹಾಸನ ಠಾಣೆಯಲ್ಲಿ ದೂರು ದಾಖಲಾಗಿತ್ತು.





