ಮಥುರಾ: ಪೊಲೀಸ್ ವಾಹನ ಅಪಘಾತ:
ಮೂವರು ಪೊಲೀಸ್ ಅಧಿಕಾರಿಗಳು ಸೇರಿ ಐವರು ಮೃತ್ಯು
ಮಥುರಾ: ಮಥುರಾದ ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಪೊಲೀಸ್ ಸಿಬ್ಬಂದಿ ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಈ ಹಿಂದೆ ಅಪಹರಣಕ್ಕೊಳಗಾಗಿದ್ದ ಬಾಲಕಿಯನ್ನು ವಾಪಸ್ ಕರೆತರಲು ಮಧ್ಯಪ್ರದೇಶದಿಂದ ಹರಿಯಾಣಕ್ಕೆ ತೆರಳುತ್ತಿದ್ದ ಪೊಲೀಸರ ಕಾರು ಭೀಕರ ಅಪಘಾತಕ್ಕೆ ಒಳಗಾಗಿದೆ.
ಇಬ್ಬರು ಪೊಲೀಸ್ ಸಿಬ್ಬಂದಿ ಮತ್ತು ಚಾಲಕ ಸ್ಥಳದಲ್ಲೇ ಮೃತಪಟ್ಟರೆ, ಇನ್ನಿಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಶ್ರೀಶ್ ಚಂದ್ರ ಅವರು ತಿಳಿಸಿದ್ದಾರೆ.
ಹುಡುಗಿಯನ್ನು ಕರೆತರಲು ಹರಿಯಾಣದ ಬಹದ್ದೂರ್‌ಗಢಕ್ಕೆ ಹೋಗುತ್ತಿದ್ದ ವೇಳೆ ಪೊಲೀಸರ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಎರಡು ಭಾಗಗಳಾಗಿ ಮುರಿದು ಬಿದ್ದಿದೆ ಎಂದು ಅವರು ಹೇಳಿದ್ದಾರೆ.
ಮೃತರನ್ನು ಹೆಡ್ ಕಾನ್‌ಸ್ಟೆಬಲ್ ಭವಾನಿ ಸಿಂಗ್, ಕಾನ್‌ಸ್ಟೆಬಲ್‌ಗಳಾದ ಹೀರಾ ದೇವಿ ಮತ್ತು ಕಮಲೇಂದ್ರ, ಚಾಲಕ ಜಗದೀಶ್ ಮತ್ತು ರವಿ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.





