ವಿಟ್ಲ: ಮಧ್ಯರಾತ್ರಿ ಕೇರಳ ಮೂಲದ ಕಾರಿನಲ್ಲಿ ಸಂಶಯಾಸ್ಪದ ರೀತಿಯಲ್ಲಿ ತಿರುಗಾಟ ಪ್ರಕರಣ ಸುಖಾಂತ್ಯ
ವಿಟ್ಲ: ಕೇರಳದ ಮೂಲದ ಕಾರಿನಲ್ಲಿ ಸಂಶಯಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ಮೂವರು ವ್ಯಕ್ತಿಗಳನ್ನು ಸ್ಥಳೀಯರು ಪೊಲೀಸರ ವಶಕ್ಕೆ ನೀಡಿದ ಘಟನೆಗೆ ಸಂಬಂಧಿಸಿ ಪೊಲೀಸರು ಮೂವರು ವ್ಯಕ್ತಿಗಳನ್ನು ಮನೆಗೆ ಕಳುಹಿಸಿದ್ದಾರೆ.
ವಿಟ್ಲ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದ ಸೆರ್ಕಳ ಕಲ್ಲಮಜಲು ಎಂಬಲ್ಲಿ ಈ ಘಟನೆ ನಡೆದಿತ್ತು.
ರಾತ್ರಿ 12ಗಂಟೆಯ ಸುಮಾರಿಗೆ ಕೇರಳ ನೋಂದಣಿಯ ಮಾರುತಿ ರಿಡ್ಜ್ ಕಾರಿನಲ್ಲಿ ಮೂವರು ಯುವಕರು ಅನುಮಾನಾಸ್ಪದವಾಗಿ ಮನೆಯೊಂದರ ಬಳಿ ನಿಂತಿದ್ದರು. ಸುದ್ದಿ ತಿಳಿದು ಸ್ಥಳೀಯರು ವಿಚಾರಿಸಿದಾಗ ಕೇರಳದ ವಡಗರ ಎಂದು ಅಸ್ಪಷ್ಟ ಮಾಹಿತಿ ನೀಡಿದ ಕಾರಣ ಸ್ಥಳೀಯರು ವಿಟ್ಲ ಪೊಲೀಸ್ ಠಾಣೆಗೆ ಕರೆ ಮಾಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದರು.
ಸೆರ್ಕಳ ಸಲೀಂ ಎಂಬಾತ ನಮ್ಮನ್ನು ಬರುವಂತೆ ಹೇಳಿದ್ದು ಎಂದು ಈ ಮೂವರು ತಿಳಿಸಿದ್ದು, ಯಾವ ಉದ್ಧೇಶಕ್ಕಾಗಿ ಎಂಬುದನ್ನು ಸ್ಪಷ್ಟವಾಗಿ ತಿಳಿಸಿಲ್ಲ ಎಂದು ಸ್ಥಳೀಯರು ತಿಳಿಸಿದ್ದರು. ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದು, ಮೂವರನ್ನೂ ವಿಟ್ಲ ಪೊಲೀಸರು ವಶಕ್ಕೆ ಪಡೆದು ವಿಚಾರ ನಡೆಸಿದ್ದರು.
ವಿದೇಶದಲ್ಲಿ ಬೆಳೆದ ಸ್ನೇಹ:
ಈ ನಾಲ್ವರು ವಿದೇಶದಲ್ಲಿ ಕೆಲಸದಲ್ಲಿದ್ದು, ಒಂದೇ ರೂಮ್ ನಲ್ಲಿ ತಂಗಿದ್ದರು. ಪರಸ್ಪರ ಆತ್ಮೀಯರಾಗಿದ್ದರು. ತದ ಬಳಿಕ ಊರಿಗೆ ಮರಳಿದ್ದರು ತಮ್ಮ ಸ್ನೇಹಿತ ಸಲೀಂ ನನ್ನು ನೋಡಲು ರಿಡ್ಜ್ ಕಾರಿನಲ್ಲಿ ವಿಟ್ಲ ಸಮೀಪದ ಸೆರ್ಕಳ ಎಂಬಲ್ಲಿಗೆ ಬಂದಿದ್ದರು. ಸಲೀಂ ಮನೆ ಗ್ರಾಮೀಣ ಭಾಗದಲ್ಲಿದ್ದು, ಆತನ ಮನೆ ಹುಡುಕಲು ಅವರಿಗೆ ಕಷ್ಟವಾಗಿದೆ. ಇದರಿಂದ ಸುತ್ತಮುತ್ತ ಸಲೀಂ ನ ಮನೆಗಾಗಿ ಹುಡುಕಾಟ ನಡೆಸುತ್ತಿದ್ದರು. ಇದರಿಂದ ಅನುಮಾನಗೊಂಡ ಸ್ಥಳೀಯರು ತಪ್ಪು ಗೃಹಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಠಾಣೆಯಲ್ಲಿ ವಿಚಾರಣೆ ನಡೆಸಿದಾಗ ನೈಜ ವಿಚಾರ ಬೆಳಕಿಗೆ ಬಂದಿದೆ. ಪೊಲೀಸರು ಈ ಪ್ರಕರಣಕ್ಕೆ ಅಂತ್ಯ ಹಾಡಿದ್ದು, ಅವರ ಮನೆಗೆ ಕಳುಹಿಸಿಕೊಟ್ಟಿದ್ದಾರೆ.





