ಕಡಬ: ಅಪಘಾತದಲ್ಲಿ ಶಾಲಾ ಬಾಲಕ ಸ್ಥಳದಲ್ಲೇ ಮೃತ್ಯು
ಕಡಬ: ಕಾರು ಮತ್ತು ಸ್ಕೂಟರ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಶಾಲಾ ಬಾಲಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಇಲ್ಲಿನ ಕಳಾರ ಸಮೀಪ ಡಿ.15ರ ಶುಕ್ರವಾರ ತಡರಾತ್ರಿ ನಡೆದಿದೆ.
ಕಾಣಿಯೂರು ಮೂಲದ ಪ್ರಸ್ತುತ ಕಳಾರದಲ್ಲಿ ವಾಸವಿರುವ ಚಂದ್ರಶೇಖರ ಅವರ ಪುತ್ರ, ಸರಸ್ವತಿ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಬಿಪಿನ್ ಮೃತಪಟ್ಟ ಬಾಲಕ.
ಬಿಪಿನ್ ತಮ್ಮ ಮನೆಗೆ ತಲುಪುವ ಸುಮಾರು ನೂರು ಮೀಟರ್ ಅಂತರದಲ್ಲಿ ಈ ಅಪಘಾತ ನಡೆದಿದ್ದು, ಈ ಅಪಘಾತದಲ್ಲಿ ಮೃತ ಬಾಲಕನ ತಂದೆ ಚಂದ್ರಶೇಖರ ಮತ್ತು ತಂಗಿ ಗಂಭೀರ ಗಾಯದೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸರಸ್ವತಿ ಶಾಲೆಯಲ್ಲಿ ನಡೆದಿದ್ದ ಕ್ರೀಡೋತ್ಸೋವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಾಪಸ್ ಆಗುತ್ತಿದ್ದ ವೇಳೆ ಈ ಅಪಘಾತ ನಡೆದಿದೆ. ಮೃತ ಬಾಲಕನ ಮರಣೋತ್ತರ ಪರೀಕ್ಷೆ ಕಡಬ ಸರಕಾರಿ ಆಸ್ಪತ್ರೆಯಲ್ಲಿ ನಡೆದಿದೆ.




