ದಕ್ಷಿಣ ಆಫ್ರಿಕಾ ಸರಣಿಯ ಬಳಿಕ ದ್ರಾವಿಡ್ ಕೋಚ್ ಭವಿಷ್ಯದ ಬಗ್ಗೆ ನಿರ್ಧಾರ: ಜಯ್ ಶಾ
ಮುಂಬೈ: ಇತ್ತೀಚೆಗೆ ಮುಕ್ತಾಯಗೊಂಡ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ರ ನಂತರ ಅವರ ಒಪ್ಪಂದದ ಅವಧಿ ಮುಗಿದ ನಂತರ ಬಿಸಿಸಿಐ ರಾಹುಲ್ ದ್ರಾವಿಡ್ ಅವರೊಂದಿಗೆ ಚರ್ಚೆಯಲ್ಲಿ ತೊಡಗಿದೆ ಮತ್ತು ಅಧಿಕಾರಾವಧಿಯನ್ನು ಮುಂದುವರಿಸಲು ಸರ್ವಾನುಮತದಿಂದ ಒಪ್ಪಿಗೆ ನೀಡಿದೆ ಎಂದು ಬಿಸಿಸಿಐ ಅಧಿಕೃತ ಹೇಳಿಕೆಯಲ್ಲಿ ತಿಳಿಸಿತ್ತು.
ಆದರೆ ದ್ರಾವಿಡ್ ಎರಡನೇ ಅವಧಿ ಎಷ್ಟರವರೆಗೆ ಎಂದು ತಿಳಿಸಲಾಗಿಲ್ಲ. ಒಂದು ಮಾಹಿತಿಯ ಪ್ರಕಾರ ಟಿ20 ವಿಶ್ವಕಪ್ ವರೆಗೆ ದ್ರಾವಿಡ್ ಕೋಚಿಂಗ್ ಮುಂದುವರಿಯಲಿದೆ.
ಈ ಬಗ್ಗೆ ಮಾಧ‍್ಯಮಗಳಿಗೆ ಪ್ರತಿಕ್ರಿಯಿಸಿರುವ ಜಯ್ ಶಾ ‘ನಾವು ದ್ರಾವಿಡ್ ರನ್ನು ಮುಂದುವರಿಸಲು ತೀರ್ಮಾನಿಸಿದ್ದೇವೆ. ಆದರೆ ನಾವಿಬ್ಬರೂ ಒಪ್ಪಂದದ ಬಗ್ಗೆ ಮಾತುಕತೆ ನಡೆಸಬೇಕಿದೆಯಷ್ಟೇ. ವಿಶ್ವಕಪ್ ಮುಗಿದ ಬಳಿಕ ನಮಗೆ ಈ ಬಗ್ಗೆ ಕೂತು ಮಾತನಾಡಲೂ ಸಮಯ ಸಿಕ್ಕಿಲ್ಲ. ದ್ರಾವಿಡ್ ಮತ್ತು ಸಿಬ್ಬಂದಿ ಜೊತೆ ಮಾತುಕತೆ ನಡೆಸಿ ಇದೇ ಹುದ್ದೆಯಲ್ಲಿ ಮುಂದುವರಿಯುವ ಬಗ್ಗೆ ತೀರ್ಮಾನ ಮಾಡಿದೆವು. ಆದರೆ ಅವಧಿ ಎಷ್ಟು ಸಮಯ ಎಂದು ದ.ಆಫ್ರಿಕಾ ಪ್ರವಾಸದಿಂದ ದ್ರಾವಿಡ್ ವಾಪಸ್ ಆದ ಮೇಲೆ ತೀರ್ಮಾನಿಸಲಿದ್ದೇವೆ’ ಎಂದಿದ್ದಾರೆ.