ಮಂಗಳೂರು: ಲೋಕಸಭೆಯ ಕಲಾಪದ ಅನುವಾದಕರಾಗಿ ಸುಳ್ಯದ ಡಾ.ಗೋವಿಂದ ನೇಮಕ
ಪುತ್ತೂರು: ಲೋಕಸಭೆಯ ಕಲಾಪದಲ್ಲಿ ನಡೆಯುವ ಚರ್ಚೆಗಳನ್ನು ಇಂಗ್ಲಿಷ್ ಮತ್ತು ಪ್ರಾದೇಶಿಕ ಭಾಷೆಗೆ ಭಾಷಾಂತರ ಮಾಡುವ ಕನ್ಸಲ್ಟಂಟ್ ಇಂಟಪ್ರಿಟರ್ ಹುದ್ದೆಗಳಿಗೆ ಸಂಬಂಧಿಸಿ ಕನ್ನಡ ಭಾಷಾಂತರಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಸಮೀಪದ ಸುಳ್ಯ ತಾಲೂಕಿನ ಹರಿಹರ ಪಳ್ಳತ್ತಡ್ಕ ಗ್ರಾಮದ ಗುಂಡಿಹಿತ್ಲು ನಿವಾಸಿ ಡಾ| ಗೋವಿಂದ ಎನ್.ಎಸ್. ಅವರು ನೇಮಕಗೊಂಡಿದ್ದಾರೆ.
ಲೋಕಸಭೆಯ ಅಧಿವೇಶನದ ಕಾರ್ಯಕಲಾಪಗಳನ್ನು ಭಾರತೀಯ ಭಾಷೆಗಳಿಗೆ ಅನುವಾದಿಸುವ ಸಲುವಾಗಿ ಹೊಸ ಸಂಸತ್ ಭವನದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಅದಕ್ಕಾಗಿ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಗೊಂಡಿರುವ ಎಲ್ಲಾ ಭಾಷೆಗಳಲ್ಲೂ ತಲಾ 5 ಕನ್ಸಲ್ಟಂಟ್ ಹುದ್ದೆಗಳನ್ನು ಸೃಷ್ಟಿಸಲಾಗಿದೆ.
ಕನ್ನಡಕ್ಕೆ ಭಾಷಾಂತರ ಹುದ್ದೆಗೆ 15 ಮಂದಿ ಅರ್ಜಿ ಸಲ್ಲಿಸಿದ್ದು, 10 ಮಂದಿಯನ್ನು ಆಯ್ಕೆ ಮಾಡಲಾಗಿತ್ತು, ನಾಲ್ವರು ನೇಮಕಗೊಂಡಿದ್ದಾರೆ. ಅವರಲ್ಲಿ ಮೂವರು ದಿಲ್ಲಿಯ ಕನ್ನಡಿಗರಾಗಿದ್ದು, ಡಾ. ಗೋವಿಂದ ಎನ್.ಎಸ್. ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದಾರೆ. ಈ ಮೊದಲು ಓರ್ವರು ಪೂರ್ಣಕಾಲಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದರು.




