ಹೆಣ್ಣು ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣ: ಇಬ್ಬರು ನರ್ಸ್ ಗಳ ಬಂಧನ
ಮೈಸೂರಿನ ಉದಯಗಿರಿಯ ಮಾತಾ ಆಸ್ಪತ್ರೆ ಶುಶ್ರೂಷಕಿ ಮಂಜುಳಾ ಮತ್ತು ಚಾಮುಂಡೇಶ್ವರಿ ಆಸ್ಪತ್ರೆಯ ಉಮಾ ಬಂಧಿತರು. ಭ್ರೂಣ ಲಿಂಗ ಪತ್ತೆಗೆ ಬರುತ್ತಿದ್ದ ಗರ್ಭಿಣಿಯರು ಹೆಣ್ಣು ಮಗು ಬೇಡ ಎಂದಾಗ ಅವರಿಂದ ಹಣ ಪಡೆದು ಗರ್ಭಪಾತ ಮಾಡಿಸುತ್ತಿದ್ದರು. ಮೃತ ಭ್ರೂಣಗಳನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ತುಂಬಿ ಕಾವೇರಿ ನದಿ ಮತ್ತು ಮೈಸೂರಿನ ರಾಜಾ ಕಾಲುವೆಗೆ ಎಸೆಯುತ್ತಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಉದಯಗಿರಿಯ ಮಾತಾ ಆಸ್ಪತ್ರೆ ಗರ್ಭಪಾತದ ಕೇಂದ್ರವಾಗಿತ್ತು. ಆಸ್ಪತ್ರೆ ಮಾಲೀಕ ಡಾ. ಚಂದನ್ ಬಲ್ಲಾಳ್, ಆತನ ಪತ್ನಿ ಮೀನಾ ಮತ್ತು ಸ್ವಾಗತಗಾರ್ತಿ ರಿಜ್ಮಾ ಖಾನಂ ಎಂಬುವರನ್ನು ಬೈಯಪ್ಪನಹಳ್ಳಿ ಪೊಲೀಸರು ಈಗಾಗಲೆ ಬಂಧಿಸಿದ್ದಾರೆ. ಡಾ. ಚಂದನ್ ಬಲ್ಲಾಳ್ ದಂಪತಿ ವಿಚಾರಣೆ ವೇಳೆ ಗರ್ಭಪಾತ ಕೃತ್ಯದಲ್ಲಿ ಮಂಜುಳಾ ಪಾತ್ರದ ಬಗ್ಗೆ ಬಯಲಾಗಿತ್ತು. ಕೃತ್ಯ ಬೆಳಕಿಗೆ ಬಂದ ಬಳಿಕ ಪೊಲೀಸರ ಬಂಧನ ಭೀತಿಯಿಂದ ಅಲ್ಲಿ ಕೆಲಸ ತೊರೆದು ಬೇರೊಂದು ಆಸ್ಪತ್ರೆಯಲ್ಲಿ ಆಕೆ ಕೆಲಸಕ್ಕೆ ಸೇರಿದ್ದಳು.
ಆರೋಪಿಗಳ ಪತ್ತೆಗೆ ಪೂರ್ವ ವಿಭಾಗ ಡಿಸಿಪಿ ಡಿ. ದೇವರಾಜ್ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಎಂ. ಪ್ರಶಾಂತ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು. ಕೊನೆಗೂ ಮೈಸೂರಿನಲ್ಲಿ ಮಂಜುಳಾ ಸೆರೆ ಸಿಕ್ಕಿದ್ದಾಳೆ. ಈಕೆ ವಿಚಾರಣೆ ವೇಳೆ ಮೈಸೂರಿನ ಚಾಮುಂಡೇಶ್ವರಿ ಆಸ್ಪತ್ರೆಯ ನರ್ಸ್ ಉಮಾ ಕುರಿತು ಮಾಹಿತಿ ಲಭ್ಯವಾಗಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು, ಆಕೆಯನ್ನೂ ಶನಿವಾರ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ತಿಂಗಳಿಗೆ ನಾಲ್ಕೈದು ಗರ್ಭಪಾತ
2021ರಿಂದ ಹೆಣ್ಣು ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆಯಲ್ಲಿ ಮಂಜುಳಾ ತೊಡಗಿದ್ದು, ಪ್ರತಿ ತಿಂಗಳು 4-5 ರಿಂದ ಗರ್ಭಿಣಿಯರಿಗೆ ಗರ್ಭಪಾತ ಮಾಡಿಸಿದ್ದಳು. ಭ್ರೂಣ ಲಿಂಗ ಪತ್ತೆ ಹಚ್ಚುತ್ತಿದ್ದ ಆರೋಪಿಗಳು, ಬಳಿಕ ಹೆಣ್ಣು ಮಗು ಬೇಡ ಎನ್ನುವ ದಂಪತಿಯಿಂದ ಹಣ ಪಡೆದು ಗರ್ಭಪಾತ ಮಾಡಿಸುತ್ತಿದ್ದರು. ಇದರಲ್ಲಿ ಚಾಮುಂಡೇಶ್ವರಿ ಆಸ್ಪತ್ರೆಯ ಉಮಾ ಸಹ ಸಕ್ರಿಯವಾಗಿದ್ದಳು. ಎರಡು ವರ್ಷದಲ್ಲಿ 96ಕ್ಕೂ ಹೆಚ್ಚಿನ ಮಹಿಳೆಯರಿಗೆ ಗರ್ಭಪಾತ ಮಾಡಿಸಿದ್ದು, ಇದಕ್ಕೆ ಪೂರಕ ದಾಖಲೆ ಪತ್ತೆಯಾಗಿವೆ. 14ರಿಂದ 15 ವಾರಗಳ ಅವಧಿಯ ಭ್ರೂಣದ ಲಿಂಗ ಪತ್ತೆ ಮಾಡಿ ಮಾತ್ರೆ ಕೊಟ್ಟು ಗರ್ಭಪಾತ ಮಾಡಿಸುತ್ತಿದ್ದರು ಎನ್ನಲಾಗಿದೆ.
6 ತಿಂಗಳ ಮಗುವಿಗೆ ಜೀವ ಇರುತ್ತಿತ್ತು!
ತಿಂಗಳಲ್ಲಿ ಕನಿಷ್ಠ 2 ಪ್ರಕರಣದಲ್ಲಿ 6 ತಿಂಗಳ ಮಕ್ಕಳನ್ನು ಹೊರತೆಗೆದಿದ್ದೇನೆ. ಆ ಮಕ್ಕಳಿಗೆ ಜೀವ ಇರುತ್ತಿತ್ತು. 6 ತಿಂಗಳ ಮಗುವಿಗೆ ಧ್ವನಿ ಇರುವುದಿಲ್ಲ. ಮಗು ಹೊರಗೆ ತೆಗೆದ 5 ರಿಂದ 10 ನಿಮಿಷದಲ್ಲಿ ಸಾಯುತ್ತಿದ್ದವು. ಅದನ್ನು ಪೇಪರ್‌ನಲ್ಲಿ ಸುತ್ತಿ ನಿಸಾರ್‌ಗೆ ಕೊಡುತ್ತಿದ್ದೆ. ನಿಸಾರ್ ಆ ಮಗುವನ್ನು ತೆಗೆದುಕೊಂಡು ಹೋಗಿ ಕಾವೇರಿ ನದಿಗೆ ಬಿಸಾಕಿ ಬರುತ್ತಿದ್ದ ಎಂಬ ಭಯಾನಕ ಮಾಹಿತಿಯನ್ನು ಮಂಜುಳಾ ಬಾಯ್ಬಿಟ್ಟಿದ್ದಾಳೆ. 12 ವಾರ ಕಳೆದ ಮಕ್ಕಳನ್ನು ಅಬಾರ್ಷನ್ ಮಾಡಿ ಮೆಡಿಕಲ್ ವೇಸ್ಟ್‌ಗೆ ಹಾಕುತ್ತಿದ್ದೆವು. 4 ದಿನಕ್ಕೆ ಮೆಡಿಕಲ್ ವೇಸ್ಟ್‌ನಲ್ಲಿ ಮಗು ಕೊಳೆತು ಹೋಗುತ್ತಿತ್ತು. 6 ತಿಂಗಳ ಮಗುವನ್ನು ಸಿಸೇರಿಯನ್ ಮೂಲಕ ಹೆರಿಗೆ ರೀತಿ ಮಾಡುತ್ತಿದ್ದೆವು. ಸಿ ಸೆಕ್ಷನ್ ಮೂಲಕ ತೆಗೆದು ಟೇಬಲ್ ಮೇಲೆ ಇಡಲಾಗುತ್ತಿತ್ತು. 5 ರಿಂದ 10 ನಿಮಿಷಕ್ಕೆ ಆ ಮಗು ಸಾಯುತ್ತಿತ್ತು. ತಾಯಿಗೆ ಪ್ರಜ್ಞೆ ಇಲ್ಲದಂತೆ ಮಾಡಿ ಸಿ ಸೆಕ್ಷನ್ ಮಾಡಲಾಗುತ್ತಿತ್ತು ಎಂದು ಮಂಜುಳಾ ಹೇಳಿದ್ದಾಳೆ ಎಂದು ಗೊತ್ತಾಗಿದೆ.





