December 23, 2024

ಬೆಳ್ತಂಗಡಿ: ಮನೆಯ ಶೆಡ್‌ ನಲ್ಲಿ ನಿಲ್ಲಿಸಿದ್ದ ಕಾರು ಕಳವು: ನಾಲ್ವರು ಪೊಲೀಸರ ವಶಕ್ಕೆ

0

ಬೆಳ್ತಂಗಡಿ: ಮನೆಯ ಶೆಡ್‌ನ‌ಲ್ಲಿ ನಿಲ್ಲಿಸಿದ್ದ ಇನ್ನೋವಾ ಕಾರನ್ನು ಕಳ್ಳತನ ಮಾಡಿದ ಪ್ರಕರಣವನ್ನು ಧರ್ಮಸ್ಥಳ ಪೊಲೀಸರು ಭೇದಿಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿರುವ ಘಟನೆ ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆಯಲ್ಲಿ ನಡೆದಿದೆ.

ಕಿನ್ನಿಗೋಳಿಯ ತಾಳಿಪಾಡಿ ಗ್ರಾಮದ ಉಮಾ ಅಜಯ್‌ ಶೆಟ್ಟಿ(32), ಬೆಳ್ತಂಗಡಿ ತಾಲೂಕಿನ ಸೋಣಂದೂರು ಗ್ರಾಮದ ಗಾಣದಬೆಟ್ಟು ನಿವಾಸಿ ಸೂರಜ್‌ ಶೆಟ್ಟಿ(23), ಇಳಂತಿಲ ಗ್ರಾಮದ ಎನ್ಮಾಡಿ ನಿವಾಸಿ ಮಂಜುನಾಥ ಪೂಜಾರಿ (30) ಮತ್ತು ಬಂಟ್ವಾಳ ತಾಲೂಕು ಶಂಭೂರು ಗ್ರಾಮದ ಪರೆಕಲ್‌ ನಿವಾಸಿ ಕಿಶೋರ್‌ ಟಿ.(32) ಬಂಧಿತ ಆರೋಪಿಗಳು.

ಚಾರ್ಮಾಡಿ ಗ್ರಾಮದ ಕಕ್ಕಿಂಜೆಯಲ್ಲಿ ಇಸಾಕ್‌ ಅವರ ಅಕ್ಕನ ಮಗ ನೌಫಾಲ್‌ ತನ್ನ ಕಾರ್‌ಶೆಡ್ಡಿನಲ್ಲಿ ನಿಲ್ಲಿಸಿದ್ದ ಇನ್ನೋವಾ ಕಾರನ್ನು ಗೆಳೆಯ ಸೈಫ‌ುದ್ದಿನ್‌ನ ಸ್ನೇಹಿತ ಸೂರಜ್‌ ಶೆಟ್ಟಿ ಮತ್ತು ಅಜಯ್‌ ಶೆಟ್ಟಿ ಅವರು ಬಾಡಿಗೆಗೆ ನೀಡುವಂತೆ ಕೇಳಿದ್ದರು. ಆದರೆ ಕಾರನ್ನು ನೀಡದ ಕಾರಣ ಅವರೇ ಕಳವು ಮಾಡಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಲಾಗಿತ್ತು.

 

 

ಬೆಳ್ತಂಗಡಿ ಪೊಲೀಸ್‌ ಇನ್ಸ್ ಪೆಕ್ಟರ್‌ ನಾಗೇಶ್‌ ಕದ್ರಿ ಅವರ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಅನಿಲ್‌ ಕುಮಾರ್‌ ಡಿ. ಮತ್ತು ಸಬ್‌ ಇನ್‌ಸ್ಪೆಕ್ಟರ್‌ ಸಮರ್ಥ ರವೀಂದ್ರ ಗಾಣಿಗೇರ, ಎಎಸ್‌ಐಗಳಾದ ಸಾಮ್ಯುವೆಲ್‌ ಮತ್ತು ಪೌಲೋಸ್‌ ಹಾಗೂ ಸಿಬಂದಿ ರಾಜೇಶ್‌ ಎನ್‌., ಪ್ರಶಾಂತ್‌, ಮಂಜುನಾಥ್‌, ಮಲ್ಲಿಕಾರ್ಜುನ್‌ ಅವರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಇನ್ನು ಆರೋಪಿಗಳನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಅವರಿಗೆ 14 ದಿನಗಳವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

Leave a Reply

Your email address will not be published. Required fields are marked *

error: Content is protected !!