ಕುಂದಾಪುರ: ಹೊಯ್ಗೆ ಧಕ್ಕೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ಕಾರ್ಮಿಕ ಮೃತ್ಯು
ಕುಂದಾಪುರ: ಶನಿವಾರ ಸಂಜೆ ಇದ್ದಕ್ಕಿದ್ದಂತೆ ಸುರಿದ ಮಳೆ ಗಾಳಿ ಹಾಗೂ ಸಿಡಿಲಿಗೆ ಕುಂದಾಪುರ ದಂಗಾಗಿದ್ರೆ ತಾಲೂಕಿನ ಕಂಡ್ಲೂರು ಸಮೀಪ ಹಳ್ನಾಡ್ ಹೊಳೆಯಲ್ಲಿ ಹೊಯ್ಗೆ ಧಕ್ಕೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರೊಬ್ಬರು ಸಿಡಿಲು ಬಡಿದು ಸಾವನ್ನಪ್ಪಿರುವ ಘಟನೆ ನಡೆದಿದೆ.
ಕಾರ್ಮಿಕನನ್ನು ಉತ್ತರ ಪ್ರದೇಶದ ಮೂಲದ ದೀಪ್ ಚಂದ್ (38) ಎಂದು ಗುರುತಿಸಲಾಗಿದೆ.
ಹಳ್ನಾಡ್ ಹೊಳೆಯ ಹೊಯ್ಗೆ ಧಕ್ಕೆಯಲ್ಲಿ ಉತ್ತರ ಪ್ರದೇಶದ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಕಾರ್ಮಿಕರು ದೋಣಿಯಿಂದ ಹೊಯ್ಗೆ ಖಾಲಿ ಮಾಡುತ್ತಿದ್ದ ಸಂದರ್ಭ ಸಂಜೆ 5 ಗಂಟೆಗೆ ಸಿಡಿಲು ಬಡಿದ ಪರಿಣಾಮ ದೀಪ್ ಚಂದ್ ಸ್ಥಳದಲ್ಲೇ ಮೃತ ಪಟ್ಟಿದ್ದಾನೆ. ಮತ್ತೊರ್ವ ಕಾರ್ಮಿಕ ಅಲ್ಲೇ ನೀರಿಗೆ ಬಿದ್ದು ಪ್ರಾಣಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.
ಇನ್ನು ದೀಪ್ ಚಂದ್ ಮೃತದೇಹವನ್ನು ಕುಂದಾಪುರ ಶವಗಾರದಲ್ಲಿಡಲಾಗಿದೆ. ಕಂಡ್ಲೂರು ಪೊಲೀಸರು ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿದ್ದಾರೆ. ಆದರೆ ಮೃತ ಕಾರ್ಮಿಕ ಯಾರ ಒಡೆತನದ ಧಕ್ಕೆಯಲ್ಲಿ ಕೆಲಸ ಮಾಡುತ್ತಿದ್ದ ಎನ್ನುವುದು ಬಹಿರಂಗಗೊಂಡಿಲ್ಲ.