September 19, 2024

ಪುತ್ತೂರು ಸೇರಿದಂತೆ ದ.ಕ ಜಿಲ್ಲೆಯ 5 ಭಜರಂಗದಳದ ಕಾರ್ಯಕರ್ತರಿಗೆ ಗಡಿಪಾರು ನೋಟೀಸ್

0

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಐವರು ಭಜರಂಗದಳ ಕಾರ್ಯಕರ್ತರಿಗೆ ಗಡೀಪಾರು ನೋಟೀಸ್ ನೀಡಲಾಗಿದೆ ಎಂದು ತಿಳಿದು ಬಂದಿದೆ.

ನೈತಿಕ ಪೊಲೀಸ್ ಗಿರಿಯಲ್ಲಿ ಭಾಗಿಯಾಗಿದ್ದ ಭಜರಂಗದಳ ಕಾರ್ಯಕರ್ತರಿಗೆ ಗಡೀಪಾರು ಅಸ್ತ್ರ ಪ್ರಯೋಗ ಮಾಡಲಾಗಿದೆ. ನಿಮ್ಮನ್ನು ಯಾಕೆ ಗಡೀಪಾರು ಮಾಡಬಾರದು ಎಂದು ಕಾರಣ ಕೇಳಿ ನೋಟೀಸ್ ನೀಡಲಾಗಿದೆ. ಅಲ್ಲದೆ ನ. 22ರಂದು ಪುತ್ತೂರು ಸಹಾಯಕ ಆಯುಕ್ತರ ಎದುರು ಹಾಜರಾಗಲು ಸೂಚನೆ ನೀಡಲಾಗಿದೆ.

ಪ್ರಮುಖವಾಗಿ ಭಜರಂಗದಳ ಕಾರ್ಯಕರ್ತ ಲತೇಶ್ ಗುಂಡ್ಯ, ಪ್ರಜ್ವಲ್, ನಿಶಾಂತ್, ಪ್ರದೀಪ್ ಮತ್ತು ದಿನೇಶ್ ಗೆ ನೋಟೀಸ್ ನೀಡಲಾಗಿದ್ದು, ಇನ್ನು ಭಜರಂಗದಳದಲ್ಲಿ ಪುತ್ತೂರು ತಾಲೂಕು ಜವಾಬ್ದಾರಿ ಹೊಂದಿರೋ ದಿನೇಶ್, ಪ್ರಜ್ವಲ್, ಭಜರಂಗದಳ ಪುತ್ತೂರು ಜಿಲ್ಲಾ ಸಹ ಸಂಯೋಜಕ್ ಆಗಿರೋ ಲತೇಶ್ ಗುಂಡ್ಯ, ಉಳಿದ ಇಬ್ಬರು ಕಾರ್ಯಕರ್ತರಾದ ನಿಶಾಂತ್ ಮತ್ತು ಪ್ರದೀಪ್ ವಿರುದ್ದವೂ ಗಡೀಪಾರು ಅಸ್ತ್ರ ಪ್ರಯೋಗಿಸಲಾಗಿದೆ. ಈ ಐವರಲ್ಲಿ ಲತೇಶ್ ಹೊರತುಪಡಿಸಿ ಉಳಿದ ನಾಲ್ಬರ ಮೇಲೆ ಒಂದೊಂದೇ ಪ್ರಕರಣಗಳಿದ್ದವು. ಕೋಮು ಗಲಭೆ, ದನಸಾಗಾಟ ಹಲ್ಲೆ, ನೈತಿಕ ಪೊಲೀಸ್ ಗಿರಿ ಸೇರಿ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪವಿದೆ.

ಪುತ್ತೂರು ನಗರ ಠಾಣೆ ಹಾಗೂ ಸುಳ್ಯ ಠಾಣೆಯಿಂದ ಗಡೀಪಾರಿಗೆ ಮನವಿ ಮಾಡಲಾಗಿತ್ತು. ಹೀಗಾಗಿ ಲತೇಶ್ ಗೆ ಬಳ್ಳಾರಿ ಜಿಲ್ಲೆಗೆ ಗಡೀಪಾರಿಗೆ ಮನವಿ ಮಾಡಲಾಗಿದೆ. ಪ್ರಜ್ವಲ್ ಗೆ ಬಾಗಲಕೋಟೆ ಜಿಲ್ಲೆಗೆ ಗಡೀಪಾರು ಮಾಡಲು ಮನವಿ ಮಾಡಲಾಗಿದ್ದು, ಕರ್ನಾಟಕ ಪೊಲೀಸ್ ಅಧಿನಿಯಮ 1953ರ ಕಲಂ 55ರಡಿ ಗಡೀಪಾರು ನೋಟೀಸ್ ನೀಡಲಾಗಿದೆ. ವಿಚಾರಣೆಗೆ ಹಾಜರಾದ ಬಳಿಕ ಅಧಿಕೃತವಾಗಿ ಒಂದು ವರ್ಷಗಳ ಕಾಲ ಗಡೀಪಾರು ಆದೇಶ ಸಾಧ್ಯತೆ ಇದೆ. ಸ್ಥಳೀಯ ಠಾಣೆಗಳ ಇನ್ಸ್‌ಪೆಕ್ಟರ್ ಗಳಿಂದ ಗಡೀಪಾರಿಗೆ ವರದಿ ಕೇಳಲಾಗಿದೆ. ಹೀಗಾಗಿ ಅಧಿಕೃತವಾಗಿ ಕಾನೂನು ಪ್ರಕಾರ ಗಡೀಪಾರು ಅಸ್ತ್ರ ಪ್ರಯೋಗ ಮಾಡಲಾಗಿದೆ. ಕಳೆದ ಜುಲೈನಲ್ಲಿ ಮಂಗಳೂರಿನ ಮೂವರು ಭಜರಂಗದಳ ಕಾರ್ಯಕರ್ತರ ಮೇಲೆ ಗಡೀಪಾರು ಅಸ್ತ್ರ ಪ್ರಯೋಗಿಸಲಾಗಿತ್ತು. ಆದರೆ ನ್ಯಾಯಾಲಯದ ಮೆಟ್ಟಿಲೇರಿ ತಡೆ ತಂದಿದ್ದ ಭಜರಂಗದಳ ಸಂಘಟನೆ ಅದನ್ನು ರದ್ದುಗೊಳಿಸಿತ್ತು.

Leave a Reply

Your email address will not be published. Required fields are marked *

error: Content is protected !!