ನಾಟಿ ಔಷಧಿ ಸೇವಿಸಿ 7 ವರ್ಷದ ಬಾಲಕ ಮೃತ್ಯು
ಚಿಕ್ಕಬಳ್ಳಾಪುರ: ನಾಟಿ ಔಷಧಿ ಸೇವಿಸಿ ಬಾಲಕನೊಬ್ಬ ಮೃತಪಟ್ಟ ಘಟನೆ ತಾಲೂಕಿನ ನಲ್ಲಗುಟ್ಟಪಾಳ್ಯ ಗ್ರಾಮದಲ್ಲಿ ನಡೆದಿದೆ. ಅಕ್ಟೋಬರ್ 13 ರಂದು ಘಟನೆ ನಡೆದಿದ್ದರೂ ಇತ್ತೀಚೆಗೆ ಪ್ರಕರಣ ಬೆಳಕಿಗೆ ಬಂದಿದೆ.
ನಲ್ಲಗುಟ್ಟ ಪಾಳ್ಯದ 7 ವರ್ಷದ ಬಾಲಕ ವೇದೇಶ್ ಕಿವಿಯಲ್ಲಿ ಗಾಯಗಳಾಗಿದ್ದವು, ಹೀಗಾಗಿ ಆತನ ಪೋಷಕರಾದ ಶ್ರೀನಿವಾಸ್ ಮತ್ತು ಶಶಿಕಲಾ ತಮ್ಮ ಗ್ರಾಮದಿಂದ ಸುಮಾರು 15 ಕಿಮೀ ದೂರದಲ್ಲಿರುವ ಬೋಯಿನೇಹಳ್ಳಿಯಲ್ಲಿರುವ ಸಾಂಪ್ರಾದಾಯಿಕ ವೈದ್ಯರ ಬಳಿ ಕರೆದೊಯ್ದಿದ್ದರು ಎಂದು ಚಿಕ್ಕ ಬಳ್ಳಾಪುರ ಎಸ್ ಪಿ ನಾಗೇಶ್ ತಿಳಿಸಿದ್ದಾರೆ.
ನಾಟಿ ವೈದ್ಯ ಔಷಧಿ ನೀಡಿದರೂ ಬಾಲಕನ ಸ್ಥಿತಿ ಸುಧಾರಿಸಲಿಲ್ಲ, ಆರೋಗ್ಯ ಮತ್ತಷ್ಟು ಹದಗೆಟ್ಟಿತ್ತು, ಅಕ್ಟೋಬರ್ 13 ರಂದು ಬೆಳಗ್ಗೆ 10.30ರ ಸುಮಾರಿಗೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು, ಪರೀಕ್ಷಿಸಿದ ವೈದ್ಯರು ಆತ ಸಾವನ್ನಪ್ಪಿರುವುದಾಗಿ ಘೋಷಿಸಿದ್ದರು ಎಂದು ಎಸ್ ಪಿ ಮಾಹಿತಿ ನೀಡಿದ್ದಾರೆ.