April 5, 2025

ಹಣ ಒದಗಿಸಲು ಆಗುತ್ತಿಲ್ಲ ಎಂದಾದರೆ ಹೊಸ ತಾಲೂಕುಗಳನ್ನು ರದ್ದುಪಡಿಸಿಬಿಡಿ: ಹೈಕೋರ್ಟ್

0

ಬೆಂಗಳೂರು: ಹೊಸದಾಗಿ ಘೋಷಿಸಿದ 50 ತಾಲೂಕುಗಳಲ್ಲಿ ತಾಲೂಕು ಕೇಂದ್ರ ಕಚೇರಿ, ಇತರೆ ಸರ್ಕಾರಿ ಕಚೇರಿಗಳನ್ನು ಸ್ಥಾಪಿಸಲು ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲು ವಿಳಂಬ ಮಾಡುತ್ತಿರುವ ಸರ್ಕಾರದ ಕಾರ್ಯವೈಖರಿಗೆ ಅಸಮಧಾನ ವ್ಯಕ್ತಪಡಿಸಿರುವ ಹೈಕೋರ್ಟ್‌, “ಹಣ ಒದಗಿಸಲು ಆಗುತ್ತಿಲ್ಲ ಎಂದಾದರೆ ಹೊಸ ತಾಲೂಕುಗಳನ್ನು ರದ್ದುಪಡಿಸಿಬಿಡಿ’ ಎಂದು ಸರ್ಕಾರಕ್ಕೆ ಕಟು ಮಾತಿನ ಚಾಟಿ ಬೀಸಿದೆ.

ರಾಜ್ಯ ಸರ್ಕಾರ 2017-18ನೇ ಸಾಲಿನ ಬಜೆಟ್‌ನಲ್ಲಿ ಹೊಸದಾಗಿ ಘೋಷಣೆ ಮಾಡಿದ 50 ತಾಲೂಕುಗಳಲ್ಲಿ ಸರಿಯಾಗಿ ತಾಲೂಕು ಕೇಂದ್ರ ಕಚೇರಿ ಸೇರಿದಂತೆ ಇತರ ಸರ್ಕಾರಿ ಕಚೇರಿಗಳು ಸ್ಥಾಪನೆ ಆಗಿಲ್ಲ. ಮೂರು ವರ್ಷ ಕಳೆದರೂ ಜನರು ಪರದಾಡುತ್ತಿದ್ದಾರೆ ಎಂದು ಆರೋಪಿಸಿ ಬೀದರ್‌ ಜಿಲ್ಲೆಯ ಸಾಮಾಜಿಕ ಕಾರ್ಯಕರ್ತ ಗುರುನಾಥ ವಡ್ಡೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮಂಗಳವಾರ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ಆಗ ಸರ್ಕಾರದ ಪರ ವಕೀಲರು ಪ್ರಮಾಣಪತ್ರ ಸಲ್ಲಿಸಿ, ಹಣಕಾಸಿ ಕೊರತೆಯ ಕಾರಣಕ್ಕೆ ಹೊಸ ತಾಲೂಕುಗಳಲ್ಲಿ ಸ್ವಂತ ಸರ್ಕಾರಿ ಕಚೇರಿಗಳ ಸ್ಥಾಪನೆ ಆಗಿಲ್ಲ. ಕಚೇರಿಗಳ ಸ್ಥಾಪನೆಯನ್ನು ತಾತ್ಕಾಲಿಕವಾಗಿ ಮುಂದೂಡುವಂತೆ ಹಣಕಾಸು ಇಲಾಖೆ ಹೇಳಿದೆ. ಎಲ್ಲಾ 50 ತಾಲೂಕುಗಳಲ್ಲಿ ಮೂಲಸೌಕರ್ಯಗಳನ್ನು ಒದಗಿಸಲು ದೊಡ್ಡ ಮೊತ್ತದ ಹಣಕಾಸು ಬೇಕಾಗುತ್ತದೆ. ಕೋವಿಡ್‌ ಹಾಗೂ ಪ್ರವಾಹದ ಹಿನ್ನಲೆಯಲ್ಲಿ ಆರ್ಥಿಕ ಪರಿಸ್ಥಿತಿ ಅಷ್ಟೊಂದು ಸರಿಯಿಲ್ಲ. ತೆರಿಗೆ ಸಂಗ್ರಹದಲ್ಲಿ ಸಹ ಕಡಿತವಾಗಿದೆ. ಈ ನಿಟ್ಟಿನಲ್ಲಿ ಹಂತ-ಹಂತವಾಗಿ ಹಣಕಾಸಿನ ನೆರವು ನೀಡಲು ರಾಜ್ಯ ಸರ್ಕಾರ ತನ್ನ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

 

 

ಅದಕ್ಕೆ, “ಹೊಸ ತಾಲೂಕುಗಳನ್ನು ರಚಿಸುವಂತೆ ಹೈಕೋರ್ಟ್‌ ಹೇಳಿರಲಿಲ್ಲ. ಸರ್ಕಾರ ತಾನೇ ತೀರ್ಮಾನಿಸಿ 50 ಹೊಸ ತಾಲೂಕುಗಳನ್ನು ಘೋಷಿಸಿದೆ. ಈಗ ಹಣಕಾಸಿನ ಕೊರತೆ ಇದೆ, ಆರ್ಥಿಕ ಇಲಾಖೆ ನಿರ್ಬಂಧ ಹೇರಿದೆ ಎಂದು ಸರ್ಕಾರವೇ ಹೇಳುತ್ತಿದೆ. ಹೀಗಿದ್ದಾಗ, ಹೊಸ ತಾಲೂಕುಗಳನ್ನು ಸದ್ಯ ರದ್ದುಪಡಿಸಿ, ಹಣಕಾಸಿನ ಲಭ್ಯತೆ ಆದಾಗ ಅವುಗಳಿಗೆ ಕಚೇರಿ ಹಾಗೂ ಮೂಲಸೌಕರ್ಯಗಳನ್ನು ಒದಗಿಸುವ ಬಗ್ಗೆ ಯೋಚಿಸಿ ಎಂದು ಹೇಳಿತು.

Leave a Reply

Your email address will not be published. Required fields are marked *

You may have missed

error: Content is protected !!