ವಿಟ್ಲ: 400kv ವಿದ್ಯುತ್ ಮಾರ್ಗ ಕಾಮಗಾರಿ ವಿರುದ್ಧ ರೈತರಿಂದ ಆಕ್ರೋಶ: ಪುತ್ತೂರು ಶಾಸಕರು ಕಂಪೆನಿ ಪರ ನಿಂತರೆ, ವಿಟ್ಲ ಭಾಗಕ್ಕೆ ಬಂದಾಗ ಕಪ್ಪುಬಾವುಟ ಹಾರಿಸ್ತೇವೆ!
ವಿಟ್ಲ: 400ಕೆ.ವಿ ವಿದ್ಯುತ್ ಮಾರ್ಗದ ಸಮರ್ಪಕ ಮಾಹಿತಿಯನ್ನು ನೀಡದೆ ಜಾಗದಲ್ಲಿ ಟವರ್ ನಿರ್ಮಾಣ ಮಾಡುವ ಬಗ್ಗೆ ಹೇಳಿಕೊಂಡು ಬಂದಿದ್ದಾರೆ. ಪರಿಹಾರಗಳನ್ನು ನೀಡುವ ಬಗ್ಗೆ ಹೇಳಿಕೊಂಡಿದ್ದರೂ, ಪರಿಹಾರಗಳು ಸಮರ್ಪಕವಾಗಿ ರೈತರಿಗೆ ಸಿಕ್ಕಿಲ್ಲ. ವಿದ್ಯುತ್ ಮಾರ್ಗದಿಂದ ಕೃಷಿ ಭೂಮಿ ಕಳೆದುಕೊಳ್ಳುತ್ತಿದ್ದು, ಬಳಿಕದ ದಿನದಲ್ಲಿ ಕೃಷಿ ಮಾಡಲು ಅಸಾಧ್ಯವಾಗಿದೆ. ಪವರ್ ಲೈನ್ ಅಡಿಯಲ್ಲಿ ತೊಂದರೆ ಬರುವಂತದ್ದು ಜಾಸ್ತಿಯಿದೆ. ಹೈಟೆನ್ಷನ್ ಲೈನ್ ಹೋದಾಗಾ ಹಾರ್ಮ್ ಫುಲ್ ರೇಸ್ ಡೆವಲಪ್ ಮಾಡುವುದರಿಂದ ತೊಂದರೆಗಳಿದೆ ಎಂದು ಕೃಷಿಕ ವಾರಣಾಸಿ ಫಾರ್ಮ್ಸ್ ಮಾಲಿಕ ವಾರಣಾಸಿ ಡಾ. ಕೃಷ್ಣಮೂರ್ತಿ ಹೇಳಿದರು.
ವಿಟ್ಲದಲ್ಲಿ ಕರೆದ ಪತ್ರಿಕಾಗೋಷ್ಠಿ ಮಾತನಾಡಿದ ಅವರು
ಕರ್ನಾಟಕದಲ್ಲಿ ವಿದ್ಯುತ್ ಕೊರತೆ ಇರುವ ಸಂದರ್ಭದಲ್ಲಿ ಕೇರಳಕ್ಕೆ ಸಾಗಿಸುವ ಯೋಜನೆಯನ್ನು ಯಾಕೆ ಹಾಕಿದ್ದಾರೆ. ಮೂರರಿಂದ ನಾಲ್ಕು ಎಕ್ರೆ ಭೂಪ್ರದೇಶವಿದ್ದು, ಒಂದು ಗೋಪುರ ನಿಲ್ಲುವ ಜತೆಗೆ ವಿದ್ಯುತ್ ತಂತಿ ಜಾಗವನ್ನು ಹಾದುಹೋಗಲಿದೆ ಎಂಬ ಮಾಹಿತಿಯನ್ನು ಹೇಳುತ್ತಿದ್ದಾರೆ. ಶಾಸಕರು ಕರೆದ ಸಭೆಗೆ ವೈಯಕ್ತಿಕವಾಗಿ ಹೋಗಲು ಸಾಧ್ಯವಾಗಿಲ್ಲ. ಪರಿಹಾರ ಇದೆ ಎಂಬುದನ್ನು ಹೇಳಲಾಗಿದೆ ಹೊರತು ಎಷ್ಟು ಎಂಬುದನ್ನು ಸ್ಪಷ್ಟ ಪಡಿಸಿಲ್ಲ. ಪರಿಹಾರ ನೀಡಿದರೂ, ಜಾಗ ಬಿಡುವ ಪ್ರಶ್ನೆ ಇಲ್ಲ. ಕೆಲವು ಸೆಂಟ್ಸ್ ನಲ್ಲಿ ವಿದ್ಯುತ್ ಲೈನ್ ಹಾದು ಹೋದರೂ, ಜಾಗದ ಸಂಪೂರ್ಣ ವ್ಯಾಲ್ಯೂ ಹೋಗಿಡುತ್ತದೆ. ಭೂಮಿಯನ್ನು ಮಾರಾಟ ಮಾಡುವ ಆಲೋಚನೆ ಮಾಡಿದರೂ ಕೊಳ್ಳಲು ಜನ ಬಾರದ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಮಾಹಿತಿ ನೀಡಿದರು
ಸಂತ್ರಸ್ತ ರೈತ ಮೋಹನ ಭಂಡಾರಿ ಮಾತನಾಡಿ ಜಾಗ ೭೦ ವರ್ಷಗಳಿಂದ ಸ್ವಾಧೀನದಲ್ಲಿದ್ದು, ಕೃಷಿ ಚಟುವಟಿಕೆಗಳನ್ನು ಮಾಡಿಕೊಂಡು ಬರಲಾಗುತ್ತಿದೆ. ಸ್ಥಳಕ್ಕೆ ಬಂದವರು ೨೦ ಸೆಂಟ್ಸ್ ಜಾಗ ಹೋಗುವ ಬಗ್ಗೆ ಹೇಳಿಕೊಂಡಿದ್ದಾರೆ. ಒಂದು ವರ್ಷದ ಹಿಂದೆ ಮಾರ್ಕ್ ಮಾಡಿ ಜಾಗ ಗುರುತಿಸುವ ಕಾರ್ಯವನ್ನು ಮಾಡಿದ್ದಾರೆ. ಸರ್ವೇ ಮಾಡಲು ಬಂದವರು ವರ್ಗದ ಕುಮ್ಕಿ ಬರುತ್ತಿರುವ ಕಾರಣ ಸರ್ಕಾರಿ ಜಾಗಕ್ಕೆ ಯಾವುದೇ ಪರಿಹಾರವನ್ನು ನೀಡುವುದಿಲ್ಲವೆಂದಿದ್ದಾರೆ. ಮೊದಲು ಕರ್ನಾಟಕದವರು ಬಂದಾಗ ಪರಿಹಾರ ಇದೆ, ವಿದ್ಯುತ್ ಮಾರ್ಗ ಹೋಗುವಾಗ ಮರ ಎಲ್ಲಾ ಕಡಿಯುವುದಿಲ್ಲ ಎಂದು ತಿಳಿಸಿದ್ದರು. ಈಗ ಕೇರಳದವರು ಬಂದು ಪರಿಹಾರ ಇಲ್ಲವೂ ಇಲ್ಲ, ತೆಂಗು ಸೇರಿ ಅಲ್ಲಿರುವ ಗಿಡ ಮರಗಳನ್ನು ಕಡಿಯುತ್ತೇವೆ ಎಂದು ಹೇಳುತ್ತಿದ್ದಾರೆ. ಶಾಸಕರು ಕರೆದ ಸಂದರ್ಭದ ಕುಮ್ಕಿ ಜಾಗ ಎಂಬುದನ್ನು ಹೇಳಿದ್ದಾರೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ದ ಕ ಜಿಲ್ಲಾ ಅಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಮಾತನಾಡಿ ಕೇರಳದಿಂದ ಕರ್ನಾಟಕ ಪ್ರವೇಶ ಮಾಡುವ ಪ್ರದೇಶದಲ್ಲಿ ಕೃಷಿಕರನ್ನು ಶಾಸಕರು ಕರೆದು ಮಾತುಕತೆ ಮಾಡಿದ್ದು, ಕಂಪನಿಯವರು ಕಾರ್ಮಿಕರನ್ನು ಕರೆದುಕೊಂಡು ಬಂದಾಗ ತಡೆಯುವ ಕಾರ್ಯ ಮಾಡಲಾಗಿದೆ. ಕುಮ್ಕಿ ಜಾಗ ಸರ್ಕಾರಿ ಜಾಗ ಅದಕ್ಕೆ ಪರಿಹಾರ ಇಲ್ಲ ಎಂದು ಶಾಸಕರು ಹೇಳುತ್ತಿದ್ದಾರೆ. ಶಾಸಕರು ಜನರ ಹಾಗೂ ರೈತರ ಪರ ಇರಬೇಕು ಹೊರತು ಕಂಪನಿಯವರ ಪರ ಇರುವುದಲ್ಲ. ರಮಾನಾಥ ರೈ ಹೋರಾಟದ ಸಂದರ್ಭದಲ್ಲಿ ದರಣಿ ಕೂರುವ ಜತೆಗೆ ಈಗಗಲೂ ರೈತರ ಪರವಿದ್ದಾರೆ. ಶಕುಂತಳಾ ಟಿ ಶೆಟ್ಟಿ, ಸಂಜೀವ ಮಠಂದೂರು, ಅರುಣ ಕುಮಾರ್ ಪುತ್ತಿಲ ಅವರು ರೈತರ ಪರ ಇದ್ದು, ಕಂಪನಿಯ ವಿರುದ್ದ ಬಹಳ ದೊಡ್ಡ ಮಟ್ಟದ ಹೋರಾಟವನ್ನು ಮಾಡುವ ಮೂಲಕ ಓಡಿಸುವ ಕಾರ್ಯ ಮಾಡಲಾಗುವುದು ಎಂದು ತಿಳಿಸಿದರು.
ಉಡುಪಿ ಕಾಸರಗೋಡು ೪೦೦ ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗ ವಿರೋಧಿ ವಿಟ್ಲ ಹೋರಾಟ ಸಮಿತಿ ಅಧ್ಯಕ್ಷ ರಾಜೀವ ಗೌಡ ಮಾತನಾಡಿ ನ್ಯಾಯಾಲಯದ ಸ್ಟೇಯನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಕಂಪನಿಯವರು ರೈತರ ಭೂಮಿಗೆ ಅನಧಿಕೃತವಾಗಿ ಬಂದು ಕೆಲಸಕ್ಕೆ ಮುಂದಾಗುತ್ತಿದ್ದಾರೆ. ಶಾಸಕರಿಗೆ ಧರ್ಮ, ಮನುಷ್ಯತ್ವ ಎಂಬುದು ಬೇಕಾಗಿದೆ. ಜನರು ಹೆಣವಾಗುವ ಸಮಯದಲ್ಲೂ ಶಾಸಕರು, ಹೆಣದ ಮೇಲೆ ಬಿದ್ದದ್ದನ್ನು ಹೆಕ್ಕಿ ತಿನ್ನಲು ಪ್ರಯತ್ನ ಮಾಡುತ್ತಿದ್ದಾರೆ. ನಾವು ಶಾಸಕರಾಗಿ ಆಯ್ಕೆ ಮಾಡಿದ್ದಕ್ಕೆ ಪಶ್ಚಾತ್ತಾಪ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಂಪನಿಯ ದಲ್ಲಾಲಿಯಂತೆ ವರ್ತಿಸುವ ಶಾಸಕರು ತಮ್ಮ ಜವಾಬ್ದಾರಿಯನ್ನು ಅರ್ಥಮಾಡಿಕೊಳ್ಳಬೇಕು. ಮಾಜಿ ಶಾಸಕರು, ಯುವನಾಯಕರು ರೈತರಿಗೆ ಬೆಂಬಲ ನೀಡಿ ದೈರ್ಯ ತುಂಬುವ ಕೆಲಸ ಮಾಡಿದ್ದಾರೆ. ರೈತರು ಬೆಳೆದ ಅನ್ನ ತಿಂದು ಬದುಕುವವರು ಅವರ ರಕ್ಷಣೆ ಮಾಡುವ ಬದ್ದತೆಯನ್ನು ಹೊಂದಬೇಕು. ಹೋರಾಟದಲ್ಲಿ ರಾಜಿಯಿಲ್ಲ, ಪರಿಹಾರ ಬೇಡ, ಜನರನ್ನು ದ್ವಂಸ ಮಾಡುವ ಲೈನ್ ಹೋಗಬಾರದು. ಶಾಸಕರು ಕಂಪನಿಯವರ ಪರವಾಗಿದ್ದರೆ, ವಿಟ್ಲ ಭಾಗಕ್ಕೆ ಬರುವ ಸಂದರ್ಭದಲ್ಲಿ ಕಪ್ಪುಬಾವುಟ ಹಿಡಿಯುವ ಕಾರ್ಯ ಮಾಡಲಾಗುವುದು ಎಂದು ತಿಳಿಸಿದರು.
ಹೋರಾಟ ಸಮಿತಿಯ ರೋಹಿತಾಶ್ವ ಬಂಗ, ಚಿತ್ತರಂಜನ್, ಅಣ್ಣು ಗೌಡ, ಪ್ರದೀಪ್ ಮತ್ತಿತರರು ಉಪಸ್ಥಿತರಿದ್ದರು.




