ಮಂಗಳೂರು: ಅಸೀಫ್ ಆಪತ್ಭಾಂದವ ಬಂಧನ
ಮಂಗಳೂರು: ಸಾಮಾಜಿಕ ಹೋರಾಟಗಾರ ಹಾಗೂ ಮೈಮುನ ಫೌಂಡೇಶನ್ ಮುಖ್ಯಸ್ಥ ಅಸೀಫ್ ಆಪತ್ಭಾಂದವ ಅವರನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.
ಬುಧವಾರ ರಾತ್ರಿ ಆಸೀಫ್ ಅವರು ರೋಗಿಯೊಬ್ಬರನ್ನು ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲು ತೆರಳಿದ್ದರು ಎನ್ನಲಾಗಿದೆ.
ಈ ವೇಳೆ ಅವರ ಆಪತ್ಭಾಂದವ ಆ್ಯಂಬುಲೆನ್ಸ್ ನ್ನು ಆಸ್ಪತ್ರೆಯ ಮುಂಭಾಗದ ಖಾಲಿ ಜಾಗದಲ್ಲಿ ನಿಲ್ಲಿಸಿ ರೋಗಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು ಎನ್ನಲಾಗಿದೆ.
ಈ ವೇಳೆ ಸ್ಥಳಕ್ಕೆ ಬಂದ ಮಹಿಳಾ ಸೆಕ್ಯೂರಿಟಿಯೊಬ್ಬರು ಆ್ಯಂಬುಲೆನ್ಸ್ ತೆರವು ಗೊಳಿಸುವಂತೆ ಸೂಚಿಸಿದ್ದಾರೆ. ಈ ವೇಳೆ ಸೆಕ್ಯೂರಿಟಿ ಮತ್ತು ಆಸೀಫ್ ಅವರ ನಡುವೆ ಮಾತಿನ ಚಕಮಕಿಯೂ ನಡೆದಿದೆ ಎನ್ನಲಾಗಿದೆ.
ಈ ಸಂಬಂಧ ಮಹಿಳಾ ಸೆಕ್ಯೂರಿಟಿ ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ರೋಗಿಯನ್ನು ಅಡ್ಮಿಷನ್ ಮಾಡಿಸುತ್ತಿದ್ದ ವೇಳೆ ಪೊಲೀಸರು ಆಸೀಫ್ ಅವರನ್ನು ಬಂಧಿಸಿ ಕರೆದೊಯ್ದಿದ್ದಾರೆ ಎಂದು ಬಲ್ಲ ಮೂಲಗಳು ಮಾಹಿತಿ ನೀಡಿದೆ. ಬಳಿಕ ಅವರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಆಸೀಫ್ ಅವರನ್ನು ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸುವ ಬಗ್ಗೆ ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.




