ಪ್ರಿಯಕರನ ಸಾವಿನಿಂದ ನೊಂದಿದ್ದ ಯುವತಿ ಆತ್ಮಹತ್ಯೆ
ಹೈದರಾಬಾದ್: ಪ್ರಿಯಕರನ ಸಾವಿನಿಂದ ನೊಂದಿದ್ದ ಪ್ರಿಯತಮೆ ನೇಣಿಗೆ ಶರಣಾಗಿ ಪ್ರಾಣ ಕಳೆದುಕೊಂಡ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಮೃತ ಯುವತಿಯನ್ನು ಪಂಜಾಬ್ ಮೂಲದ ನೇಹಾ (19) ಎನ್ನಲಾಗಿದ್ದು, ಹೈದರಾಬಾದ್ ನಲ್ಲಿ ಹಾಸ್ಟೆಲ್‌ನಲ್ಲಿ ನೆಲೆಸಿದ್ದಳು.
ನೇಹಾ ಕಳೆದ 8 ತಿಂಗಳಿನಿಂದ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದು,ಅದೇ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಸಲ್ಮಾನ್ ಎನ್ನುವ ಯುವಕನ ಜೊತೆಗೆ ಪ್ರೇಮಾಂಕುರವಾಗಿತ್ತು.
ಆದರೆ ಇಬ್ಬರ ನಡುವಿನ ಪ್ರೀತಿಯ ವಿಚಾರ ಅಂಗಡಿಯ ಮಾಲೀಕರಿಗೆ ಗೊತ್ತಾದ ನಂತರ ಸಲ್ಮಾನ್ ನನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಇದರ ಜೊತೆಗೆ ಸಲ್ಮಾನ್ ಮನೆಯವರು ನೇಹಾಳೊಂದಿಗಿನ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಇದರಿಂದ ನೊಂದ ಸಲ್ಮಾನ್ ಅಕ್ಟೋಬರ್ 1 ರಂದು ಆತ್ಮಹತ್ಯೆ ಮಾಡಿಕೊಂಡಿದ್ದನು. ಪ್ರಿಯಕರ ಸಲ್ಮಾನ್ ಆತ್ಮಹತ್ಯೆ ಮಾಡಿಕೊಂಡ ವಿಚಾರದಿಂದ ಹತಾಶಳಾದ ನೇಹಾ ಹಾಸ್ಟೆಲ್ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದಾಳೆ.




