ವಿದ್ಯುತ್ ಕಂಬದಲ್ಲಿ ರಾಂಗ್ ಕನೆಕ್ಷನ್: ಮನೆಗಳಲ್ಲಿದ್ದ 50ಕ್ಕೂ ಅಧಿಕ ಟಿವಿ, ಬಲ್ಬ್ ಫ್ರಿಡ್ಜ್ ಗಳಿಗೆ ಹಾನಿ

ಕುಷ್ಟಗಿ: ಮನೆ ನಿರ್ಮಾಣಕ್ಕೆ ಅಡಚಣೆಯಾಗಿದ್ದ ವಿದ್ಯುತ್ ತಂತಿ ಎತ್ತಿ ಕಟ್ಟುವ ಸಂದರ್ಭದಲ್ಲಿ, ರಾಂಗ್ ಕನೆಕ್ಷನ್ ಯಡವಟ್ಟಿಗೆ 50ಕ್ಕೂ ಅಧಿಕ ಟಿವಿ, ಫ್ರಿಡ್ಜ್, ಬಲ್ಬ್ ಸುಟ್ಟು ಅಪಾರ ಹಾನಿ ಸಂಭವಿಸಿದ ಘಟನೆ ಹಿರೇಮನ್ನಾಪೂರದಲ್ಲಿ ನಡೆದಿದೆ.
ಹಿರೇಮನ್ನಾಪೂರ ಗ್ರಾಮದಲ್ಲಿ ಸ್ಥಳೀಯರೊಬ್ಬರು ಮನೆ ನಿರ್ಮಿಸುತ್ತಿದ್ದಾರೆ. ಮನೆ ಮೇಲೆ ಹಾದು ಹೋದ ವಿದ್ಯುತ್ ತಂತಿ ಅಡಚಣೆಯಾಗಿದ್ದರಿಂದ ಜೆಸ್ಕಾಂ ಲೈನ್ ಮನ್ ಗೆ ಮಾಹಿತಿ ನೀಡಿದ್ದಾರೆ.
ಸದರಿ ಲೈನ್ ಮನ್ ಖಾಸಗಿ ವ್ಯಕ್ತಿಗಳಿಂದ ತಂತಿ ಎತ್ತಿ ಕಟ್ಟಿ ಮತ್ತೆ ಜೋಡಿಸಿದ್ದಾರೆ. ಈ ಜೋಡಣೆ ಸಂಧರ್ಭದಲ್ಲಿ ರಾಂಗ್ ಕನೆಕ್ಷನ್ ಮಾಡಿದ್ದರಿಂದ ಹಿರೇಮನ್ನಾಪೂರ ಭಾಗಶಃ ಮನೆಗಳಲ್ಲಿ ಟಿವಿ, ಫ್ಯಾನ್, ಫ್ರಿಡ್ಜ್ , ಬಲ್ಬ್ ಸುಟ್ಟು ಹೋಗಿದ್ದು ತಡ ರಾತ್ರಿ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಲೈನಮನ್ ವಿರುದ್ದ ದೂರು ಸಲ್ಲಿಸಲಾಗಿದೆ.
ಈ ಅವಘಡದಿಂದ ಜನರು ರಾತ್ರಿವಿಡೀ ಜೆಸ್ಕಾಂ ಸಿಬ್ಬಂದಿಗೆ ಶಪಿಸಿ ಕತ್ತಲಿನಲ್ಲಿ ಕಳೆದಿರುವುದು ಗೊತ್ತಾಗಿದೆ.