ಮಂಗಳೂರು: ‘ಬಿಜೆಪಿಯಲ್ಲಿ ಹಣವೇ ಪ್ರಧಾನವಲ್ಲ, ಹಾಗಿದ್ರೆ ಬಡ ಕಾರ್ಯಕರ್ತರಿಗೆ ಟಿಕೆಟ್ ಸಿಗ್ತಾ ಇರಲಿಲ್ಲ’: ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ
ಮಂಗಳೂರು: ಹಣವೇ ಬಿಜೆಪಿಯಲ್ಲಿ ಪ್ರಧಾನ ಆಲ್ಲ, ಹಾಗಿದ್ದರೆ ನೂರಾರು ಬಡ ಕಾರ್ಯಕರ್ತರು ಬಿಜೆಪಿಯಲಲಿ ಸಂಸದರು, ಶಾಸಕರು ಆಗುತ್ತಿರಲಿಲ್ಲ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಬೈಂದೂರು ಎಂಎಲ್‌ಎ ಬಿಜೆಪಿ ಟಿಕೆಟ್ಗಾಗಿ ಚೈತ್ರಾ ಕುಂದಾಪುರ ಹಣ ಪಡೆದುಕೊಂಡಿರುವ ಪ್ರಕರಣದ ಕುರಿತು ಮಾತನಾಡಿದ ಅವರು, ಬಿಜೆಪಿಯಲ್ಲಿ ಹಣವೇ ಪ್ರಧಾನವಾಗಿದ್ದರೆ ಬೈಂದೂರಿನ ಟಿಕೆಟ್ ಬಡ ಕಾರ್ಯಕರ್ತ ಗುರುರಾಜ್ ಶೆಟ್ಟಿ ಗಂಟಿಹೊಳೆ, ಸುಳ್ಯದ ಟಿಕೆಟ್ ಬಡ ಮಹಿಳೆ ಭಾಗೀರಥಿ ಮುರುಳ್ಯ ಅವರಿಗೆ ಸಿಗುತ್ತಿರಲಿಲ್ಲ. ಕೋಟಾ ಶ್ರೀನಿವಾಸ್ ಪೂಜಾರಿ, ಸುನೀಲ್ ಕುಮಾರ್, ನಳಿನ್ ಕುಮಾರ್ ಕಟೀಲ್, ಪ್ರತಾಪ್ ಸಿಂಹ ಅವರು ನಾಯಕರಾಗುತ್ತಿರಲಿಲ್ಲ ಎಂದರು.
ಇನ್ನು ಚೈತ್ರಾ ಕುಂದಾಪುರ ಪ್ರಕರಣದಲ್ಲಿ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರನ್ನು ಮೋಸ ಮಾಡಿದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿಯಂಥ ಬುದ್ದಿವಂತರ ಜಿಲ್ಲೆಯ ಇವರೇ ಮೋಸ ಹೋಗಿದ್ದಾರೆ. ಅವರು ನೇರವಾಗಿ ಫೋನ್ ಮಾಡಿದರೂ ಬಿಜೆಪಿ ನಾಯಕರು ಸಂಪರ್ಕಕ್ಕೆ ಸಿಗುತ್ತಿದ್ದರು. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯೇ ಅವರ ಜೊತೆ ತುಳು ಭಾಷೆಯಲ್ಲೇ ಮಾತಾಡುತ್ತಿದ್ದರು. ನಳಿನ್ ಕುಮಾರ್ ಕಟೀಲ್, ಕೋಟಾ ಶ್ರೀನಿವಾಸ ಪೂಜಾರಿಯೂ ಮಾತಾಡುತ್ತಿದ್ದರು ಎಂದಿದ್ದಾರೆ.
ಈ ಪ್ರಕರಣದ ಬಗ್ಗೆ ಸತ್ಯ ಬಹಿರಂಗ ಆಗಬೇಕು, ಸಮಗ್ರ ತನಿಖೆ ಆಗಬೇಕು. ಯಾರೇ ಇದ್ದರೂ ಸೂಕ್ತ ತನಿಖೆ ನಡೆದು ಕ್ರಮ ಆಗಲಿ. ಯಾರದ್ದೋ ಹೆಸರು ಕೇಳಿ ಬರುತ್ತಿದೆ ಅನ್ನೋದು ಬೇರೆ. ಮೊದಲು ಸಮಗ್ರ ತನಿಖೆ ಆಗಲಿ ಎಂದರು.
ಮೈತ್ರಿ ವಿಚಾರ ಮಾತನಾಡಿದ ಅವರು, ನಾವು ಪರಿಷತ್ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಚರ್ಚೆ ಆಗುತ್ತಿದೆ, ಆದರೆ ಅಂತಿಮ ಆಗಿಲ್ಲ. ಹಾಗಾಗಿ ಅದು ವರಿಷ್ಠರ ತೀರ್ಮಾನ, ನಾವು ಯಾವುದೇ ಚುನಾವಣೆಗೆ ನಮ್ಮ ಹಂತದಲ್ಲಿ ಸಿದ್ಧವಾಗುತ್ತಿದ್ದೇವೆ. ಈ ಮೈತ್ರಿ ವಿಚಾರದಲ್ಲಿ ವರಿಷ್ಠರ ನಡೆ ಮುಖ್ಯವಾಗಿದೆ ಎಂದರು.


