ಉಡುಪಿ:ಚೈತ್ರಾ ಕುಂದಾಪುರ ಅರೆಸ್ಟ್: ವಶಕ್ಕೆ ಪಡೆದ ಬೆಂಗಳೂರು ಸಿಸಿಬಿ ಪೊಲೀಸರು
ಉಡುಪಿ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೈಂದೂರಿನ ಉದ್ಯಮಿಯೊಬ್ಬರಿಗೆ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ಕೋಟ್ಯಂತರ ರೂ. ವಂಚಿಸಿ ತಲೆ ಮರೆಸಿಕೊಂಡಿದ್ದ ಸಂಘಪರಿವಾರದ ನಾಯಕಿ ಚೈತ್ರಾ ಕುಂದಾಪುರಳನ್ನು ಬೆಂಗಳೂರು ಸಿಸಿಬಿ ಪೊಲೀಸರು ಉಡುಪಿಯಲ್ಲಿ ಬಂಧಿಸಿದ್ದಾರೆ.
ಉದ್ಯಮಿ ಹಾಗೂ ಬಿಜೆಪಿ ಮುಖಂಡನಿಗೆ ಟಿಕೆಟ್‌ಕೊಡಿಸುವುದಾಗಿ 7 ಕೋ.ರೂ. ಪಡೆದು ವಂಚಿಸಿರುವ ಆರೋಪವಿದೆ. ಈ ಕುರಿತು ಉದ್ಯಮಿ ಬರೆದಿದ್ದರೆನ್ನಲಾದ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಚೈತ್ರಾ ಕುಂದಾಪುರ ಅವರು ವಂಚಿಸಿರುವ ಕುರಿತು ಉದ್ಯಮಿ ಬೆಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದರು ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಚೈತ್ರಾ ಕುಂದಾಪುರ ಮತ್ತು ಆಕೆಯ ಸಂಗಡಿಗ ಶ್ರೀಕಾಂತ್ ಪೆಲತ್ತೂರು ಎಂಬಾತನನ್ನೂ ಸಿಸಿಬಿ ಪೊಲೀಸರು ಬಂಧಿಸಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿದೆ.
ಇದೇ ಪ್ರಕರಣ ಸಂಬಂಧ ಈಗಾಗಲೇ ಚಿಕ್ಕಮಗಳೂರು ಕಡೂರು ನಿವಾಸಿ ಗಗನ್ ಕಡೂರು, ಪ್ರಸಾದ್ ಎಂಬವರನ್ನು ಪೊಲೀಸರು ಬಂಧಿಸಿದ್ದರು. ಅವರ ಹೇಳಿಕೆ ಆಧರಿಸಿ ಚೈತ್ರಾ ಕುಂದಾಪುರ ಸೇರಿ ಒಟ್ಟು ಆರು ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.






