ಒಂದೇ ಕುಟುಂಬದ ನಾಲ್ವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ
ಮೈಸೂರು: ಗಂಡ – ಹೆಂಡತಿ, ಇಬ್ಬರು ಮಕ್ಕಳ ಕುಟುಂಬವದು. ಎರಡು ತಿಂಗಳ ಹಿಂದೆಯಷ್ಟೇ ಬಾಡಿಗೆಗೆ ಬಂದಿದ್ದರು. ಹೀಗೆ ಬಾಡಿಗೆಗೆ ಬಂದವರು ಯಾರು ಎಂಬುದು ಅಕ್ಕ ಪಕ್ಕದ ಮನೆಯವರಿಗೆ ಗೊತ್ತಿರಲಿಲ್ಲ. ಅಷ್ಟರಲ್ಲೇ ಅವರೆಲ್ಲ ಒಟ್ಟಿಗೆ ಶವವಾಗಿದ್ದಾರೆ. ಮೈಸೂರಿನಲ್ಲಿ ಇಂತಹ ದಾರುಣ ಘಟನೆ ನಡೆದಿದೆ.
ಚಾಮುಂಡಿಪುರಂ ಬಡಾವಣೆಯಲ್ಲಿ ನೆಲೆಸಿದ್ದ ಒಂದೇ ಕುಟುಂಬದ ನಾಲ್ವರು ದಾರುಣವಾಗಿ ಮೃತಪಟ್ಟಿದ್ದಾರೆ.
ಕುಟುಂಬದ ಮಹದೇವಸ್ವಾಮಿ (48), ಅನಿತಾ (35), ಮಕ್ಕಳಾದ ಚಂದ್ರಕಲಾ (17), ಧನಲಕ್ಷ್ಮಿ (15) ಮನೆಯಲ್ಲಿ ಹೆಣವಾಗಿ ಪತ್ತೆಯಾಗಿದ್ದಾರೆ.
ಕೆ.ಆರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಪೊಲೀಸರ ತನಿಖೆಯ ನಂತರವೇ ಈ ಕುಟುಂಬದ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ.
ಮಗಳು ಚಂದ್ರಕಲಾ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ ಉಳಿದವರ ಶವಗಳು ಕೆಳಗೆ ಬಿದ್ದಿವೆ. ಇವರೆಲ್ಲಾ ಎರಡು ದಿನದ ಹಿಂದೆಯೇ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಇಂದು ಶವಗಳ ಕೊಳೆತ ವಾಸನೆಯಿಂದ ಅನುಮಾನಗೊಂಡ ಅಕ್ಕಪಕ್ಕದವರು ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ.