February 3, 2026

ಕಡಲ್ಕೊರೆತ ಸಮಸ್ಯೆ: ರಾಷ್ಟ್ರೀಯ ಹಸಿರು ಪ್ರಾಧಿಕಾರವನ್ನು ಸಂಪರ್ಕಿಸಲು ಉಳ್ಳಾಲದ ಅರ್ಜಿದಾರರಿಗೆ ಹೈ ಕೋರ್ಟ್ ನಿರ್ದೇಶನ’

0
1692710902072.jpg

ಬೆಂಗಳೂರು: ಕರಾವಳಿ ತೀರದ ಸವಕಳಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ(ಎನ್ ಜಿಟಿ) ಮೊರೆ ಹೋಗುವಂತೆ ಅರ್ಜಿದಾರರಿಗೆ ನಿರ್ದೇಶನ ನೀಡಿ, ಅರ್ಜಿಯನ್ನು ಹೈಕೋರ್ಟ್ ಇತ್ಯರ್ಥಪಡಿಸಿದೆ.

ಕರಾವಳಿ ತೀರದ ಸವಕಳಿ ತಡೆಗೆ ಕೇರಳದಲ್ಲಿ ಬಳಸುತ್ತಿರುವ ಸಮುದ್ರ ಅಲೆ ತಡೆ(ಸೀ ವೇವ್ ಬ್ರೇಕರ್) ವಿಧಾನವನ್ನು ಅಳವಡಿಸಿಕೊಳ್ಳಲು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡುವಂತೆ ಉಳ್ಳಾಲದ ಮೇಲಂಗಡಿ ನಿವಾಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ.ಬಿ ವರಾಳೆ ಮತ್ತು ನ್ಯಾ. ಎಂ.ಜಿ.ಎಸ್.ಕಮಲ್ ಅವರಿದ್ದ ವಿಭಾಗೀಯ ಪೀಠ, ಅರ್ಜಿಯನ್ನು ಇತ್ಯರ್ಥಪಡಿಸಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ ಹಿರಿಯ ನ್ಯಾಯವಾದಿ ಅಬೂಬಕ್ಕರ್ ಶಫಿ ಮತ್ತು ಅನ್ಸಾರ್ ವಿಟ್ಲ, ಉಲ್ಲಾಳದ ಬೆಟ್ಟಿಪ್ಪಾಡಿ ಗ್ರಾಮ ಸೇರಿದಂತೆ ರಾಜ್ಯದ ಕರಾವಳಿ ಗ್ರಾಮಗಳಲ್ಲಿ ವಾಸಿಸುವ ಮೀನುಗಾರರು ಕಡಲ್ಲೊರೆತ ಸಮಸ್ಯೆ ಎದುರಿಸುತ್ತಿದ್ದಾರೆ, ಪರಿಸರದ ಮೇಲೂ ಸಾಕಷ್ಟು ದುಷ್ಪರಿಣಾಮ ಬೀರುತ್ತದೆ. ಹೀಗಾಗಿ, ಕೇರಳ ಮಾದರಿಯಲ್ಲಿ ಸಮುದ್ರ ಅಲೆ ತಡೆ(ಸೀ ವೇವ್ ಬ್ರೇಕರ್) ವಿಧಾನವನ್ನು ಅಳವಡಿಸಿಕೊಳ್ಳಲು ರಾಜ್ಯ ಸರಕಾರಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಮನವಿ ಮಾಡಿದರು. ಬಂದರುಗಳು ಮತ್ತು ಒಳನಾಡು ಜಲಸಾರಿಗೆ ಇಲಾಖೆಯು ಪ್ರತಿ ವರ್ಷ ಬಂಡೆಗಳು ಮತ್ತು ಟೆಟ್ರಾಪಾಡ್‌ಗಳನ್ನು ತಂದು ಹಾಕಿ, ಬೃಹತ್ ಮೊತ್ತವನ್ನು ವಿನಿಯೋಗಿಸುತಿದ್ದರೂ ಕರಾವಳಿ ತೀರದ ಸವಕಳಿ ಸಮಸ್ಯೆಗೆ ಯಾವುದೇ ಶಾಶ್ವತ ಪರಿಹಾರ ಸಿಕ್ಕಿಲ್ಲ ಎಂದು ಪೀಠಕ್ಕೆ ತಿಳಿಸಿದರು. ಅಲ್ಲದೆ, ಕಡಲ ತೀರಕ್ಕೆ ಕಲ್ಲು ಹಾಕುವ ಯೋಜನೆಯು ನಿಷ್ಪ್ರಯೋಜಕ ಯೋಜನೆಯಾಗಿದ್ದು, ಕೇವಲ ಅಧಿಕಾರಿಗಳ ಜೇಬು ತುಂಬಿಸುದಕ್ಕೆ ಮಾತ್ರಕ್ಕೆ ಸೀಮಿತವಾಗಿದೆ, ಅಲ್ಲದೆ ಪ್ರಾಕ್ರತಿಕ ವಿಕೋಪದ ಹೆಚ್ಚಳಕ್ಕೆ ಕಾರಣವಾಗಿದೆ, ಆದ್ದರಿಂದ ತಕ್ಷಣದಿಂದಲೇ ಕಡಲ ತೀರಕ್ಕೆ ಕಲ್ಲು ಹಾಕುವ ಯೋಜನೆಯನ್ನು ನಿಷೇಧಿಸಿ ಹೊಸ ತಂತ್ರಜ್ಞಾನವಾದ ‘ಸೀ ವೇವ್ ಬ್ರೇಕರ್ಸ್ ‘ನಂತಹಾ ಯೋಜನೆಯನ್ನು ಜಾರಿಗೊಳಿಸಲು ಸರಕಾರವನ್ನು ಆದೇಶಿಸುವಂತೆ ನ್ಯಾಯ ಪೀಠವನ್ನು ಕೊರಿಕೊಂಡಿದ್ದರು ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠ, ಅರ್ಜಿದಾರರು ಹೇಳಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುಲು ಎನ್‌ಜಿಟಿ ಸೂಕ್ತ ಸಕ್ಷಮ ವೇದಿಕೆಯಾಗಿದೆ ಎಂದು ಅಭಿಪ್ರಾಯಪಟ್ಟಿತು. ಅರ್ಜಿದಾರರು ಪ್ರಸ್ಥಾಪಿಸುತ್ತಿರುವಂತಹ ಸಮಸ್ಯೆಗಳ ಪರಿಹಾರಕ್ಕಾಗಿಯೇ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ರಚಿಸಲಾಗಿದೆ. ಹೀಗಾಗಿ, ಅರ್ಜಿದಾರರು ಈ ಸಮಸ್ಯೆ ಪರಿಹಾರಕ್ಕೆ ಎನ್ಜಿಟಿ ಸಂಪರ್ಕಿಸಬಹುದು ಎಂದು ನಿರ್ದೇಶನ ನೀಡಿ, ಅರ್ಜಿಯನ್ನು ಇತ್ಯರ್ಥಪಡಿಸಿತು.

Leave a Reply

Your email address will not be published. Required fields are marked *

You may have missed

error: Content is protected !!