December 20, 2025

ಉಳ್ಳಾಲ: ಆಗಂತುಕನೋರ್ವನಿಂದ ವಿಷಪ್ರಾಷನ: ಒಂದು ಜಾನುವಾರು, 9 ನಾಯಿಗಳು ಬಲಿ

0
IMG-20230817-WA0015.jpg

ಉಳ್ಳಾಲ: ಆಗಂತುಕನೋರ್ವ ಹಾಕಿದ ವಿಷದಿಂದ ಒಂದು ಜಾನುವಾರು ಹಾಗೂ 9ರಷ್ಟು ನಾಯಿಗಳು ಸಾವನ್ನಪ್ಪಿರುವ ದಾರುಣ ಘಟನೆ ತಲಪಾಡಿ ಅಲಂಕಾರುಗುಡ್ಡೆ ಎಂಬಲ್ಲಿ ಸಂಭವಿಸಿದೆ.

ಅಲಂಕಾರುಗುಡ್ಡೆ ನಿವಾಸಿ ಸತ್ಯೇಂದ್ರ ಎಂಬವರಿಗೆ ಸೇರಿದ ಹಾಲು ನೀಡುವ ದನ ಸಾವನ್ನಪ್ಪಿದೆ. ಸ್ಥಳೀಯ ಒಂಭತ್ತು ನಾಯಿಗಳು ಕಳೆದ ಎರಡು ದಿನಗಳಿಂದ ಸಾವನ್ನಪ್ಪಿದೆ.

ಆಗಂತುಕನೋರ್ವ ರಸ್ತೆಬದಿಯಲ್ಲಿ ಬೀದಿನಾಯಿಗಳಿಗೆಂದು ವಿಷ ಹಾಕುತ್ತಾ ಹೋಗಿರುವುದನ್ನು ಕಂಡವರಿದ್ದಾರೆ. ನಂತರದ ದಿನಗಳಲ್ಲಿ ಅಲ್ಲಲ್ಲಿ ನಾಯಿಗಳು ಸತ್ತುಬಿದ್ದಿದ್ದು, ಇದರಲ್ಲಿ ಕೆಲವನ್ನು ಮಣ್ಣಲ್ಲಿ ಹೂತು ಹಾಕಲಾಗಿದೆಮ ಉಳಿದವು ರಸ್ತೆಬದಿಯಲ್ಲಿ ಕೊಳೆತು ದುರ್ನಾತ ಬೀರುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಘಟನೆ ಕುರಿತು ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಸ್ಥಳೀಯ ನಿವಾಸಿ ಖಾದರ್ ಎಂಬಾತ ಕೃತ್ಯ ನಡೆಸಿದ್ದಾನೆಂದು ದನದ ಮಾಲಕಿ ಅಮಿತ ಆರೋಪಿಸಿದ್ದಾರೆ. ಖಾದರ್ ಮೇಕೆಗಳನ್ನ ಸಾಕುತ್ತಿದ್ದು ಇತ್ತೀಚಿಗೆ ಆತನ ಮೇಕೆಯನ್ನು ನಾಯಿಗಳು ದಾಳಿ ನಡೆಸಿ ಕೊಂದಿದ್ದವು. ಇದರಿಂದ ಕುಪಿತಗೊಂಡಾತ ಸುತ್ತಮುತ್ತಲ ಬೀದಿ ಮತ್ತು ಸಾಕು ನಾಯಿಗಳಿಗೆ ವಿಷಾಪ್ರಾಷಣ ನಡೆಸಿ ಸುಮಾರು 25 ರಷ್ಟು ನಾಯಿಗಳ ಮಾರಣಹೋಮ‌ಗೈದಿದ್ದಾನೆ. ನಾಯಿಗಳಿಗೆ ವಿಷಪ್ರಾಷಣ ಮಾಡಿದ ಬಗ್ಗೆ ಖಾದರ್ ಬಹಿರಂಗವಾಗಿ ಜನರಲ್ಲಿ ಹೇಳಿದ್ದಾಗಿ ಅಮಿತ ಅವರು ಆರೋಪಿಸಿದ್ದಾರೆ. ಇಂದು ಕೂಡ ನಾಯಿಗಳು ವಿಷಾಹಾರ ಸೇವಿಸಿ ವಿಲ ವಿಲ ಒದ್ದಾಡುತ್ತಿರುವ ದೃಶ್ಯ ಮಾಧ್ಯಮದ ಕ್ಯಾಮೆರಾಕ್ಕೆ ಸಿಕ್ಕಿವೆ.

ಅಮಿತ ಅವರು ದನ ಸಾಕಣೆ ಮಾಡುತ್ತಿದ್ದು ನಿನ್ನೆ ಸಂಜೆ ಹಸುವೊಂದನ್ನ ಹುಲ್ಲು ಮೇಯಲು ಮನೆ ಪಕ್ಕದ ದೈವಸ್ಥಾನದ ಬಳಿ ಕಟ್ಟಿ ಹಾಕಿದ್ದು ಆರೋಗ್ಯವಾಗಿದ್ದ ಹಸು ನಿನ್ನೆ ರಾತ್ರಿ ಅಕಾಲಿಕವಾಗಿ ಸಾವನ್ನಪ್ಪಿದೆ. ಪರಿಶೀಲನೆ ನಡೆಸಿದ ಪಶು ವೈದ್ಯರು ಹಸು ವಿಷಾಹಾರ ಸೇವಿಸಿ ಸತ್ತಿರುವುದಾಗಿ ಹೇಳಿದ್ದಾರೆ.

ಘಟನಾ ಸ್ಥಳಕ್ಕೆ ಬಜರಂಗದಳ ಉಳ್ಳಾಲ ನಗರ ಪ್ರಖಂಡ ಸಂಯೋಜಕ ಅರ್ಜುನ್ ಮಾಡೂರು ಭೇಟಿ ನೀಡಿದ್ದು ಮೃತಪಟ್ಟ ಹಸುವಿನ ಮರಣೋತ್ತರ ಪರೀಕ್ಷೆ ನಡೆಸಿ ಕೃತ್ಯ ಎಸಗಿದ ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ತಲಪಾಡಿ ಗ್ರಾ.ಪಂ ಪಿಡಿಒ ಮತ್ತು ಉಳ್ಳಾಲ ಪೊಲೀಸ್ ಠಾಣೆಯ ಠಾಣಾಧಿಕಾರಿಯಲ್ಲಿ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!