ಪಿಎಫ್ಐ ಉಪ್ಪಿನಂಗಡಿ ಜಿಲ್ಲಾ ಸಮಿತಿ: ಮ್ಯಾರಾಥಾನ್, ಸ್ಪೋರ್ಟ್ಸ್ ಮೀಟ್
ಉಪ್ಪಿನಂಗಡಿ: ಜನಾರೋಗ್ಯವೇ ರಾಷ್ಟ್ರ ಶಕ್ತಿ ರಾಷ್ಟ್ರೀಯ ಅಭಿಯಾನದ ಅಂಗವಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಪ್ಪಿನಂಗಡಿ ಜಿಲ್ಲಾ ಸಮಿತಿ ವತಿಯಿಂದ ಮ್ಯಾರಥಾನ್ ಮತ್ತು ಸ್ಪೋರ್ಟ್ಸ್ ಮೀಟ್ ಉಪ್ಪಿನಂಗಡಿಯಲ್ಲಿ ನಡೆಯಿತು. ಮ್ಯಾರಥಾನ್
ಉದ್ಘಾಟನೆಯನ್ನು ಉಪ್ಪಿನಂಗಡಿ ಆರಕ್ಷಕ ಠಾಣೆಯ ಪಿ.ಎಸ್.ಐ ಓಮನ ಎನ್.ಕೆ ಯವರು ಉದ್ಘಾಟಿಸಿ ಆರೋಗ್ಯ ಹಾಗೂ ಕ್ರೀಡೆ, ವ್ಯಾಯಾಮದ ಪ್ರಾಮುಖ್ಯತೆ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.
ಪ್ರಾಸ್ತವಿಕವಾಗಿ ಮಾತನಾಡಿದ ಸಾಧಿಕ್ ನೆಲ್ಯಾಡಿ ಪಿಎಫ್‌ಐ ಸಂಘಟನೆ ಜನಾರೋಗ್ಯ ರಾಷ್ಟ್ರಶಕ್ತಿ ಕಾರ್ಯಕ್ರಮದ ಮೂಲಕ ನಡೆಸುವ ಮ್ಯಾರಥಾನ್ ರ‌್ಯಾಲಿಯ ಪ್ರಾಮುಖ್ಯತೆ ಮತ್ತು ಸಂಘಟನೆಯ ಕಾರ್ಯಕ್ಷಮತೆ ಹಾಗೂ ಕಾರ್ಯಕ್ರಮದ ಆಯೋಜನೆಯ ಬಗ್ಗೆ ವಿವರಿಸಿದರು.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಪ್ಪಿನಂಗಡಿ ಜಿಲ್ಲಾಧ್ಯಕ್ಷರಾದ ಹಮೀದ್ ಮೆಜೆಸ್ಟಿಕ್ ರವರು ಜಲೀಲ್ ಬೆನಪು ರವರಿಗೆ ಧ್ವಜ ಹಸ್ತಾಂತರ ಮಾಡುವ ಮೂಲಕ ಮ್ಯಾರಥಾನ್‌ಗೆ ಚಾಲನೆ ನೀಡಿದರು.
ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗಿ ಬಂದ ರ‌್ಯಾಲಿಯು ಉಪ್ಪಿನಂಗಡಿ ಪೇಟೆಯ ಮುಖ್ಯ ರಸ್ತೆಯ ಮೂಲಕ ಸಾಗಿ ಎಚ್.ಎಮ್ ಹಾಲ್ ಬಳಿ ಸಮಾಪ್ತಿಗೊಂಡಿತು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಕರಾದ ಭರತೇಶ್ ಮತ್ತು ಅಡ್ವೋಕೇಟ್ ಅಶ್ರಫ್ ಅಗ್ನಾಡಿ ಸಂದರ್ಭೋಚಿತವಾಗಿ ಮಾತನಾಡಿದರು.
108 ತುರ್ತು ವಾಹನ ಚಾಲಕರಾದ ಭೀಮನ ಗೌಡರವರಿಗೆ ಹೂಗುಚ್ಚ ನೀಡುವ ಮೂಲಕ ಅವರ ಸೇವೆಯನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಪ್ಪಿನಂಗಡಿ ಜಿಲ್ಲಾ ಸಮಿತಿ ವತಿಯಿಂದ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಹಲವಾರು ಕಾರ್ಯಕರ್ತರು ಹಿತೈಷಿಗಳು, ಸಾರ್ವಜನಿಕರು ಭಾಗವಹಿಸಿದ್ದು, ವಿವಿಧ ಕ್ರೀಡೆ ಮತ್ತು ವ್ಯಾಯಾಮಗಳನ್ನು ಮಾಡುವ ಮೂಲಕ ಆತ್ಮಸ್ಥೈರ್ಯ ತುಂಬಲಾಯಿತು.
ಕಾರ್ಯಕ್ರಮವನ್ನು ಪಿಎಫ್‌ಐ ಉಪ್ಪಿನಂಗಡಿ ಜಿಲ್ಲಾ ಸಮಿತಿ ಕಾರ್ಯದರ್ಶಿ ನೌಷಾದ್ ಬಿಳಿಯೂರು ಸ್ವಾಗತಿಸಿದರು. ಝಕರಿಯಾ ಸ್ಟಾರ್ ನಿರೂಪಿಸಿ, ಅಬ್ದುಲ್ ರಝಾಕ್ ಕುದ್ರಡ್ಕ ಧನ್ಯವಾದಗೈದರು.