ಉಪ್ಪಿನಂಗಡಿ: ತರಕಾರಿ ಸಾಗಿಸುತ್ತಿದ್ದ ಲಾರಿ ಚಾಲಕನ ಮೇಲೆ ಹಲ್ಲೆ ನಡೆಸಿ ಸುಲಿಗೆ: ನೆಲ್ಯಾಡಿ ಸಮೀಪದ ನೀರಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ
ಉಪ್ಪಿನಂಗಡಿ: ಬೆಂಗಳೂರಿನಿಂದ ಮಂಗಳೂರಿಗೆ ತರಕಾರಿ ಸಾಗಿಸುತ್ತಿದ್ದ ಲಾರಿಯನ್ನು ಅಡ್ಡಗಟ್ಟಿ ಚಾಲಕನಿಗೆ ಹಲ್ಲೆ ನಡೆಸಿ ಚಾಲಕನ ಬಳಿಯಿದ್ದ ಹಣವನ್ನು ದರೋಡೆ ಮಾಡಿದ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ನೀರಕಟ್ಟೆಯಲ್ಲಿ ಸಂಭವಿಸಿದೆ.
ನಿನ್ನೆ ರಾತ್ರಿ 3 ಗಂಟೆಯ ಸುಮಾರಿಗೆ ಚಾಲಕ ಮಹಮ್ಮದ್ ಫಯಾಝ್ ಎಂದಿನಂತೆ ತನ್ನ ಕಂಡಕ್ಟರ್ ಜೊತೆ ತರಕಾರಿಯನ್ನು ಮಂಗಳೂರು ಮಾರುಕಟ್ಟೆಗೆ ರವಾನಿಸುತ್ತಿದ್ದ ಸಂದರ್ಭದಲ್ಲಿ ನೆಲ್ಯಾಡಿ ಸಮೀಪದ ನೀರಕಟ್ಟೆ ಎಂಬಲ್ಲಿ ದುಷ್ಕರ್ಮಿಗಳ ತಂಡ ಲಾರಿಯನ್ನು ಅಡ್ಡಗಟ್ಟಿ ಚಾಲಕನಿಗೆ ಹಲ್ಲೆ ನಡೆಸಿ ಅವ್ಯಾಚ ಶಬ್ದಗಳಿಂದ ನಿಂದಿಸಿ 50000 ರೂಪಾಯಿಯನ್ನು ದೋಚಿ ಪರಾರಿಯಾಗಿದ್ದಾರೆ.
ಪ್ರಕರಣ ಸಂಬಂಧ ಸಂತ್ರಸ್ತ ಚಾಲಕ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾನೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಪದೇ ಪದೇ ನೈತಿಕಪೊಲೀಸ್ ಗಿರಿ ಮಾಡುತ್ತಿರುವ
ನೆಲ್ಯಾಡಿಯ ಪುಡಿ ರೌಡಿ ಟಿಪ್ಪು ಸುಲ್ತಾನ್ ಅಲಿಯಾಸ್ ರಾಜನ ತಂಡ ಈ ಕೃತ್ಯ ನಡೆಸಿದ್ದಾಗಿ ಚಾಲಕ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾನೆ.
ಹೆದ್ದಾರಿಗಸ್ತು ಪೊಲೀಸ್ ವಾಹನ ಹೆದ್ದಾರಿಯ ಬೀಡುಬಿಟ್ಟಿದ್ದರೂ ಇದರಿಂದ ಆರೋಪಿಗಳು ಯಾವುದೇ ಭಯವಿಲ್ಲದೆ ಸುಲಿಗೆಮಾಡುತ್ತಿರುವುದು ವಾಹನ ಚಾಲಕರನ್ನು ಭಯಭೀತಗೊಳಿಸಿದೆ ಎನ್ನಲಾಗಿದೆ. ಇನ್ನಾದರೂ ಪೊಲೀಸರು ಎಚ್ಚೆತ್ತುಕೊಂಡು ಈ ರೀತಿಯ ಕೃತ್ಯಗಳನ್ನು ತಡೆಯುವಲ್ಲಿ ಮುತುವರ್ಜಿವಹಿಸುತ್ತಾರಾ ಎಂಬುವುದನ್ನು ಕಾದುನೋಡಬೇಕಾಗಿದೆ.





