ಬಂಟ್ವಾಳ: ಮನೆಗೆ ಗುಡ್ಡ ಜರಿದು ಮಹಿಳೆ ಮೃತಪಟ್ಟ ಪ್ರಕರಣ: ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ
ಬಂಟ್ವಾಳ: ತಾಲೂಕಿನ ಸಜೀಪ ಮುನ್ನೂರು ಗ್ರಾಮದ ನಂದಾವರ ಮನೆಗೆ ಗುಡ್ಡ ಜರಿದು ಇಬ್ಬರು ಮಣ್ಣಿನೊಳಗಡೆ ಸಿಲುಕಿಕೊಂಡು ಅದರಲ್ಲಿ ಓರ್ವ ಮಹಿಳೆ ಮೃತಪಟ್ಟರೆ ಇನ್ನೊಬ್ವಳು ಯುವತಿ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಘಟನೆ ನಡೆದ ಸ್ಥಳಕ್ಕೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಬೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಬಳಿಕ ಮಾಧ್ಯಮದವರ ಜೊತೆ ಮಾತನಾಡಿ ದ ಅವರು ಈಗಾಗಲೇ ಸರಕಾರದಿಂದ ಮೃತಪಟ್ಟ ಕುಟುಂಬಕ್ಕೆ ಪರಿಹಾರ ನೀಡಲಾಗಿದೆ. ಮನೆ ರಿಪೇರಿಗೆ ಕೂಡ ಪರಿಹಾರ ಕಲ್ಪಿಸುವ ಬಗ್ಗೆ ಭರವಸೆ ನೀಡಿದರು.
ಘಟನೆಯಲ್ಲಿ ಝರಿನಾ ಮೃತಪಟ್ಟಿದ್ದು, ಇವರ ಮಗಳು ಸಫಾ ಅವರು ಮಂಗಳೂರು ತೇಜಸ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವಳ ಆಸ್ಪತ್ರೆಯ ಚಿಕಿತ್ಸೆ ಯ ಸಂಪೂರ್ಣ ವೆಚ್ಚವನ್ನು ಸರಕಾರದಿಂದ ಭರಿಸಲು ಸಿದ್ದರಿದ್ದು, ಜಿಲ್ಲಾಧಿಕಾರಿಯವರನ್ನು ಆಸ್ಪತ್ರೆಗೆ ಹೋಗಿ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದ್ದೇನೆ.ಘಟನೆ ನಡೆದ ಪ್ರದೇಶದಲ್ಲಿ ಇನ್ನೂ ಹಲವಾರು ಮನೆಗಳು ಅಪಾಯದಲ್ಲಿದ್ದು ಈ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸೂಚಿಸಿದ್ದೇನೆ.
ಘಟನಾ ಸ್ಥಳದಲ್ಲಿ ಮುಂದಿನ ದಿನಗಳಲ್ಲಿ ಮತ್ತೆ ಇಂತಹ ಯಾವುದೇ ಅವಘಡ ಗಳು ಸಂಭವಿಸದಂತೆ ತಡೆಗೋಡೆ ನಿರ್ಮಾಣದ ಬಗ್ಗೆ ಚಿಂತನೆ ನಡೆಸಲಾಗಿದೆ. ಸಂಬಂಧಿಸಿದ ಇಂಜಿನಿಯರ್ ಮೂಲಕ ತಡೆಗೋಡೆ ನಿರ್ಮಾಣಕ್ಕೆ ಕ್ರಿಯಯೋಜನೆ ತಯಾರಿಸಲು ಜಿಲ್ಲಾಧಿಕಾರಿ ಗೆ ಸೂಚಿಸಿದ್ದೇನೆ. ಯಾವ ರೀತಿಯಲ್ಲಿ ಅನುದಾನಗಳನ್ನು ಬಳಕೆ ಮಾಡಿಕೊಂಡು ತಡೆಗೋಡೆ ನಿರ್ಮಾಣಮಾಡಬಹುದು ಎಂಬುದನ್ನು ನೋಡಿಕೊಂಡು ಯೋಜನೆ ರೂಪಿಸುತ್ತೇವೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ, ಪ್ರಮುಖರಾದ ಚಂದ್ರಪ್ರಕಾಶ್ ಶೆಟ್ಟಿ, ಅಶ್ವನಿ ಕುಮಾರ್ ರೈ, ಬೇಬಿಕುಂದರ್, ಸುದೀಪ್ ಶೆಟ್ಟಿ, ಮಹಮ್ಮದ್ ನಂದಾವರ, ಸಿದ್ದೀಕ್ ಗುಡ್ಡೆಯಂಗಡಿ, ಸಮಾದ್ ಕೈಕಂಬ, ಇಬ್ರಾಹಿಂ ನವಾಜ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ತಹಶಿಲ್ದಾರ್ ಎಸ್.ವಿ.ಕೂಡಲಗಿ, ಪಿ.ಡಿ.ಒ.ಲಕ್ಷಣ್, ಡಿ.ವೈ.ಎಸ್.ಪಿ.ಪ್ರಥಾಪ್ ಥೋರಾಟ್ ಮತ್ತಿತರರು ಉಪಸ್ಥಿತರಿದ್ದರು.




