ಉಡುಪಿ: 2,000 ರೂ. ಲಂಚ ಪಡೆಯುತ್ತಿದ್ದಾಗ ಸಿಕ್ಕಿಬಿದ್ದ ಲೈನ್ ಮ್ಯಾನ್
ಉಡುಪಿ : ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡ ಇಂದು ಕಾರ್ಯಾಚರಣೆ ನಡೆಸಿದ್ದು, ಬೈಂದೂರು ಮೆಸ್ಕಾಂ ಲೈನ್ ಮ್ಯಾನ್ ರಮೇಶ್ ಬಡಿಗೇರನನ್ನು ಬಂಧಿಸಿದೆ.
ರಮೇಶ್ ಬಡಿಗೇರ ಕೇವಲ 2,000 ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಸಿಕ್ಕಿಬಿದ್ದ ಲೈನ್ ಮ್ಯಾನ್ ಆಗಿದ್ದಾರೆ. ವಿದ್ಯುತ್ ಕಂಬದ ಲೈನ್ ನಿಷ್ಕ್ರಿಯಗೊಳಿಸಬೇಕಾದರೆ ಲಂಚ ನೀಡಬೇಕೆಂದು ರಮೇಶ್ ಬೇಡಿಕೆ ಇಟ್ಟಿದ್ದರು.
ಮರ ಕಡಿಯುವ ಸಂದರ್ಭ ಲೈನ್ ಕಟ್ ಮಾಡಿಕೊಡುವಂತೆ ಬೈಂದೂರಿನ ಕುಸುಮಾ ಎಂಬವರು ಮನವಿ ಮಾಡಿದ್ದರು. ಆದರೆ ಲೈನ್ ನಿಷ್ಕ್ರಿಯಗೊಳಿಸಬೇಕಾದರೆ ಲಂಚ ನೀಡಬೇಕೆಂದು ಒತ್ತಾಯಿಸಿದ ಹಿನ್ನೆಲೆಯಲ್ಲಿ ಕುಸುಮಾ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಈ ಬಗ್ಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿ ರಮೇಶ್ ಬಡಿಗೇರ ಲಂಚದ ಹಣವನ್ನು ಪಡೆಯುತ್ತಿದ್ದಾಗಲೇ ರೆಡ್‌ಹ್ಯಾಂಡಾಗಿ ಬಂದಿಸಿದ್ದಾರೆ.
ಡಿವೈಎಸ್ ಪಿ ಪ್ರಕಾಶ್, ಇನ್ಸ್ಪೆಕ್ಟರ್ ಜಯರಾಮ್ ಗೌಡ ತಂಡದ ಕಾರ್ಯಾಚರಣೆ ನಡೆಸಿದ್ದರು.




