December 16, 2025

ಮಂಗಳೂರು: ಮಹಿಳೆಯ ಅತ್ಯಾಚಾರಗೈದು ಹತ್ಯೆ: ಅಪರಾಧ ಕೃತ್ಯ ಸಾಬೀತು

0
IMG-20230627-WA0036.jpg

ಮಂಗಳೂರು: ಮಹಿಳೆಯನ್ನು ಅತ್ಯಾಚಾರಗೈದು ಹತ್ಯೆ ಮಾಡಿದ ಪ್ರಕರಣವು ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸೋಮವಾರ ಸಾಬೀತಾಗಿದ್ದು, ಅಪರಾಧಿಗೆ ಶಿಕ್ಷೆ ಪ್ರಮಾಣವು ಜೂ.27ರಂದು ಪ್ರಕಟವಾಗಲಿದೆ.

ಮಂಜೇಶ್ವರ ಸಮೀಪದ ಪಾತೂರು ವರ್ಕಾಡಿ ಬದಿಮಾಲೆ ನಿವಾಸಿ ಮುಹಮ್ಮದ್ ಅಶ್ರಫ್ ಯಾನೆ ಅಶ್ರಫ್ (33) ಶಿಕ್ಷೆಗೊಳಗಾದ ಆರೋಪಿ. ಈತನು ಬಾಳೆಪುಣಿ ಗ್ರಾಮದ ಬೆಳ್ಕೇರಿಯ ಮನೆಯಲ್ಲಿ ಒಬ್ಬಂಟಿಯಾಗಿದ್ದ ಮಹಿಳೆಯನ್ನು ಕೊಲೆಗೈದ ಆರೋಪ ಎದುರಿಸುತ್ತಿದ್ದ.

ಮುಹಮ್ಮದ್ ಅಶ್ರಫ್ ಕೂಲಿ ಕೆಲಸ ಮಾಡಿಕೊಂಡಿದ್ದು, ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದಾರೆ. ಈತಮಹಿಳೆಯ ಸಹೋದರನ ಮನೆಯ ತೋಟದ ಕೆಲಸಕ್ಕೆ ಹೋಗುತ್ತಿದ್ದ. ಈ ಸಂದರ್ಭ ಮಹಿಳೆಯು ತನ್ನ ಮನೆಯಲ್ಲಿ ಒಂಟಿಯಾಗಿರುವುದನ್ನು ಗಮನಿಸಿದ್ದ.

2020ರಲ್ಲಿ ಸೆ.24 ರಂದು ಈತ ಸ್ಕೂಟರ್‌ನಲ್ಲಿ ತೆರಳಿ, ಮನೆಯೊಳಗೆ ಅಕ್ರಮ ಪ್ರವೇಶಿಸಿ ಚಿಲಕ ಹಾಕಿದ್ದ. ಬಾತ್ ರೂಮ್ ಕ್ಲೀನ್ ಮಾಡುತ್ತಿದ್ದ ಹಿಂದಿನಿಂದ ಬಿಗಿಯಾಗಿ ಹಿಡಿದು ನೆಲಕ್ಕೆ ಬೀಳಿಸಿದ್ದ.ಬಿದ್ದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆಕೆಯ ಮೇಲೆಅತ್ಯಾಚಾರವೆಸಗಿದ್ದನಲ್ಲದೆ ಉಸಿರುಗಟ್ಟಿಸಿ ಕೊಲೆಗೈದಿದ್ದ ಎಂದು ಆರೋಪಿಸಲಾಗಿತ್ತು.

ಬಳಿಕ ಆರೋಪಿ ಅಶ್ರಫ್ ಮಹಿಳೆಯ ಕಿವಿಯಲ್ಲಿದ್ದ ಚಿನ್ನ ಓಲೆ, ಮನೆಯಲ್ಲಿ ಹಾಲ್‌ನ ಮೇಜಿನ ಡ್ರಾವರ್‌ನಿಂದ 18 ಸಾವಿರ ರೂ. ನಗದು ದೋಚಿದ್ದ. ಅಲ್ಲದೆ ಮಹಿಳೆಯನ್ನು ಸುಟ್ಟು ಹಾಕಿ ಸಾಕ್ಷ್ಯ ನಾಶ ಮಾಡಿದ್ದ. ಕೃತ್ಯ ನಡೆಸಿದ ಬಗ್ಗೆ ಸುಳಿವು ಸಿಗಬಾರದೆಂದು ಮನೆಯ ಅಡುಗೆ ಕೋಣೆಯಲ್ಲಿದ್ದ ಗ್ಯಾಸ್ ಸಿಲಿಂಡರ್ ಪೈಪನ್ನು ಎಳೆದು ಹಾಕಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಕೊಣಾಜೆ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಾಂತರಾಜು ಎಸ್.ವಿ. ವಿಚಾರಣೆ ನಡೆಸಿ, ಆರೋಪಿಯ ವಿರುದ್ಧ ಐಪಿಸಿ 376 (ಅತ್ಯಾಚಾರ), ಐಪಿಸಿ 302 (ಕೊಲೆ) ಪ್ರಕರಣವನ್ನು ಸಾಬೀತುಪಡಿಸಿ ತೀರ್ಪು ನೀಡಿದ್ದಾರೆ. ಮಂಗಳೂರು ದಕ್ಷಿಣ ಉಪವಿಭಾಗದ ಅಂದಿನ ಸಹಾಯಕ ಪೊಲೀಸ್ ಆಯುಕ್ತ ರಂಜಿತ್ ಕುಮಾರ್ ಬಂಡಾರು ವಿಶೇಷ ತನಿಖಾಧಿಕಾರಿಯಾಗಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಧಿವಿಜ್ಞಾನ ಪ್ರಯೋಗಾಲಯದ ಡಾ. ಮಹಾಬಲ ಶೆಟ್ಟಿ ಮತ್ತು ಡಾ. ಸೂರಜ್ ಶೆಟ್ಟಿ ಸಾಕ್ಷ್ಯ ನುಡಿದಿದ್ದರು. ಸರಕಾರದ ಪರವಾಗಿ ಅಭಿಯೋಜಕರಾದ ಜ್ಯೋತಿ ಪ್ರಮೋದ್ ನಾಯಕ್ ಮತ್ತು ಬಿ. ಶೇಖರ್ ಶೆಟ್ಟಿ ವಾದಿಸಿದ್ದರು.

Leave a Reply

Your email address will not be published. Required fields are marked *

error: Content is protected !!