ಪುತ್ತೂರು: ವಿದ್ಯುತ್ ಸ್ಪರ್ಶ, ಲೈನ್ ಮ್ಯಾನ್ ಸಾವು
ಪುತ್ತೂರು: ವಿದ್ಯುತ್ ಕಂಬದಲ್ಲಿ ದುರಸ್ತಿ ಕಾರ್ಯದಲ್ಲಿ ನಿರತರಾಗಿದ್ದ ಪವರ್ ಮ್ಯಾನ್ ಗೆ ವಿದ್ಯುತ್ ಪ್ರವಹಿಸಿ ಗಂಭೀರ ಗಾಯಗೊಂಡ ಹಾಗೂ ಚಿಕಿತ್ಸೆಗೆಂದು ಕರೆದುಕೊಂಡು ಹೋಗುತ್ತಿದ್ದ ವೇಳೆ ದಾರಿ ಮಧ್ಯೆ ವಾಹನದಲ್ಲೆ ಕೊನೆಯುಸಿರೆಳೆದ ಘಟನೆ ಕಡಬ ತಾಲೂಕಿನ ಕುಟ್ರುಪ್ಪಾಡಿ ಎಂಬಲ್ಲಿ ಗುರುವಾರ ( ಜೂ 1) ನಡೆದಿದೆ.
ತಲೆಕ್ಕಿ ಬಳಿ ವಿದ್ಯುತ್ ಕಂಬ ಹತ್ತಿ ದುರಸ್ತಿ ಮಾಡುತ್ತಿದ್ದ ವೇಳೆ ಹಠಾತ್ ವಿದ್ಯುತ್ ಪ್ರವಹಿಸಿ ಈ ಅವಘಡ ಸಂಭವಿಸಿದೆ . ಸ್ಥಳೀಯರು ಮರದ ಕೋಲಿನ ಸಹಾಯದಿಂದ ಮೇಲಿನಿಂದ ಅವರನ್ನು ಕೆಳಗಿಳಿಸಿದ್ದು ಬಳಿಕ ಚಿಕಿತ್ಸೆಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಆದರೆ ಮಾರ್ಗ ಮಧ್ಯೆಯೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಮೆಸ್ಕಾಂ ಅಧಿಕಾರಿಗಳು ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ.




