ಮಂಗಳೂರು: ಕೋಮು ವೈಷಮ್ಯಕ್ಕೆ ಬಲಿಯಾಗಿದ್ದ ಕಾಟಿಪಳ್ಳದ ಫಾಜಿಲ್ ಕುಟುಂಬಕ್ಕೂ ರಾಜ್ಯ ಸರಕಾರ ಪರಿಹಾರ ನೀಡಬೇಕು: ಸ್ಪೀಕರ್ ಯುಟಿ ಖಾದರ್ ಮೂಲಕ ಸಿಎಂ ಸಿದ್ದರಾಮಯ್ಯರಿಗೆ ಮನವಿ
ಮಂಗಳೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಪರಿಹಾರ ನೀಡಿದ ರೀತಿಯಲ್ಲೇ ಅದೇ ಸಂದರ್ಭದಲ್ಲಿ ಕೋಮು ವೈಷಮ್ಯಕ್ಕೆ ಬಲಿಯಾಗಿದ್ದ ಕಾಟಿಪಳ್ಳದ ಫಾಜಿಲ್ ಕುಟುಂಬಕ್ಕೂ ರಾಜ್ಯ ಸರಕಾರ ಪರಿಹಾರ ನೀಡಬೇಕು ಎಂದು ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕುಟುಂಬಸ್ಥರು ಮತ್ತು ಮುಸ್ಲಿಂ ನಾಯಕರು ಮನವಿ ಮಾಡಿದ್ದಾರೆ.
ಕಳೆದ ವರ್ಷ ಜುಲೈ 26ರಂದು ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆ ನಡೆದಿತ್ತು. ಅದಕ್ಕೆ ಪ್ರತೀಕಾರ ಎನ್ನುವಂತೆ, ಅದಾಗಿ ಎರಡೇ ದಿನದಲ್ಲಿ ಸುರತ್ಕಲ್ ಬಳಿಯ ಕಾಟಿಪಳ್ಳದಲ್ಲಿ ಫಾಜಿಲ್ ಎಂಬ ಯುವಕನ ಹತ್ಯೆ ನಡೆದಿತ್ತು. ಪ್ರವೀಣ್ ಹತ್ಯೆಯಿಂದ ತೀವ್ರ ಆಕ್ರೋಶಗೊಂಡ ಬಿಜೆಪಿ ಕಾರ್ಯಕರ್ತರು, ಸುಳ್ಯದ ಬೆಳ್ಳಾರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಾರನ್ನು ಅಲುಗಾಡಿಸಿ ಘೆರಾವ್ ಹಾಕಿದ್ದರು. ಘಟನೆ ಬಳಿಕ ಪ್ರವೀಣ್ ಕುಟುಂಬಕ್ಕೆ 25 ಲಕ್ಷ ಪರಿಹಾರ, ಬಿಜೆಪಿ ವತಿಯಿಂದ ಮನೆ ಕಟ್ಟಿಸಿಕೊಡಲಾಗಿತ್ತು. ಅಲ್ಲದೆ, ಪ್ರವೀಣ್ ಪತ್ನಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ತಾತ್ಕಾಲಿಕ ಉದ್ಯೋಗ ಕೊಡಲಾಗಿತ್ತು.
ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದಿದ್ದು, ಪ್ರವೀಣ್ ಹತ್ಯೆ ಸಂದರ್ಭದಲ್ಲಿ ಸಾವನ್ನಪ್ಪಿದ್ದ ಫಾಜಿಲ್ ಕುಟುಂಬಕ್ಕೂ ಪರಿಹಾರ ನೀಡಬೇಕು ಎಂದು ಕುಟುಂಬಸ್ಥರು ಆಗ್ರಹ ಮಾಡಿದ್ದಾರೆ. ಜೊತೆಗೆ, ಸುಳ್ಯದಲ್ಲಿ ಪ್ರವೀಣ್ ಹತ್ಯೆಗೂ ಎರಡು ದಿನಗಳ ಹಿಂದೆ ಸಾವನ್ನಪ್ಪಿದ್ದ ಮಸೂದ್ ಕುಟುಂಬಕ್ಕೂ ಪರಿಹಾರ ನೀಡಬೇಕು ಎಂದು ಆಗ್ರಹ ಮಾಡಿದ್ದಾರೆ. ಇದಲ್ಲದೆ, ಸುರತ್ಕಲ್ ಕಾಟಿಪಳ್ಳದಲ್ಲಿ ಯುವತಿಯ ವಿಚಾರದಲ್ಲಿ ವೈಯಕ್ತಿಕ ದ್ವೇಷದಿಂದ ಕೊಲೆಯಾಗಿದ್ದ ಜಲೀಲ್ ಕುಟುಂಬಕ್ಕೂ ಪರಿಹಾರ ನೀಡಲು ಒತ್ತಾಯ ಮಾಡಿದ್ದಾರೆ. ಧರ್ಮಸ್ಥಳದಲ್ಲಿ ವೈಯಕ್ತಿಕ ದ್ವೇಷದಲ್ಲಿ ಹತ್ಯೆಯಾಗಿದ್ದ ದಿನೇಶ್ ಕನ್ಯಾಡಿ ಕುಟುಂಬಕ್ಕೂ ಪರಿಹಾರ ನೀಡಬೇಕೆಂದು ಕಾಂಗ್ರೆಸ್ ಮುಖಂಡರು ಒತ್ತಾಯಿಸಿದ್ದಾರೆ.
ಕೋಮು ದ್ವೇಷದಲ್ಲಿ ಹತ್ಯೆಗೀಡಾಗಿದ್ದ ಫಾಜಿಲ್ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಹಿಂದಿನ ಬಿಜೆಪಿ ಸರಕಾರದ ಮುಂದೆಯೂ ಬೇಡಿಕೆ ಇರಿಸಲಾಗಿತ್ತು. ಜಿಲ್ಲಾಡಳಿತದ ಮೂಲಕ ಮನವಿ ನೀಡಿದ್ದರೂ, ಬಿಜೆಪಿ ಸರಕಾರ ಪರಿಹಾರ ನೀಡಿರಲಿಲ್ಲ. ಇದೀಗ ಕಾಂಗ್ರೆಸ್ ಸರಕಾರಕ್ಕೆ ವಿಧಾನಸಭೆ ಸ್ಪೀಕರ್ ಮೂಲಕ ಮನವಿ ನೀಡಲಾಗಿದ್ದು ನೇರವಾಗಿ ಸಿದ್ದರಾಮಯ್ಯ ಅವರಿಗೆ ಮುಟ್ಟಿಸುವ ಪ್ರಯತ್ನ ನಡೆದಿದೆ.