ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರಿಗೆ ದೇವರ ಪಲ್ಲಕ್ಕಿ ಹೊರಲು ಅವಕಾಶ ನೀಡಿದ ವಿಚಾರ:
ಇಬ್ಬರು ಜಿ.ಎಸ್.ಬಿ ಯುವಕರಿಂದ ಕ್ಷಮೆಯಾಚನೆ
ಬೆಳ್ತಂಗಡಿ: ಬೆಳ್ತಂಗಡಿಯ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯ (ಜಿ.ಎಸ್.ಬಿ)ದ ಲಾಯಿಲ ವೆಂಕಟರಮಣ ದೇವಸ್ಥಾನದ ದೇವರ ಪಲ್ಲಕ್ಕಿಯನ್ನು ಸಂಪ್ರದಾಯ ಮುರಿದು ಹೊತ್ತ ಶಾಸಕ ಹರೀಶ್ ಪೂಂಜಾ ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಹರೀಶ್ ಪೂಂಜಾರನ್ನು ಪಲ್ಲಕ್ಕಿ ಹೊರಲು ಕರೆತಂದ ಇಬ್ಬರು ಜಿ.ಎಸ್.ಬಿ ಯುವಕರು, ಸ್ವಾಮೀಜಿಗಳು ಸೂಚಿಸಿದಂತೆ ಇಂದು ತಪ್ಪು ಕಾಣಿಕೆ ಸಲ್ಲಿಸಿ ಕ್ಷಮೆಯಾಚಿಸಿದ್ದಾರೆ.
ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಆಡಳಿತಕ್ಕೆ ಒಳಪಟ್ಟ ಬೆಳ್ತಂಗಡಿ ಲಾಯಿಲ ವೆಂಕಟರಮಣ ದೇವರ ಪಲ್ಲಕ್ಕಿ ಹೊರಲು ಕಾರ್ತಿಕ ಹುಣ್ಣಿಮೆಯ ದೀಪೋತ್ಸವದಂದು ಹರೀಶ್ ಪೂಂಜಾರಿಗೆ ಅವಕಾಶ ನೀಡಿದ ಇಬ್ಬರು ಜಿ.ಎಸ್.ಬಿ ಯುವಕರಿಗೆ ಕಾಶೀ ಮಠದ ಸಂಯಮೀಂದ್ರ ಸ್ವಾಜೀಮಿಯವರು ದೇವರ ನಡೆಯಲ್ಲಿ ತೆಂಗಿನಕಾಯಿ ಇಟ್ಟು ದೇವರಲ್ಲಿ ತಮ್ಮಿಂದಾದ ಪ್ರಮಾದದ ಬಗ್ಗೆ ತಪ್ಪು ನಿವೇದನೆ ಮಾಡಿ ಕ್ಷಮಾಪಣೆ ಕೇಳಬೇಕೆಂದು ಸೂಚಿಸಿದ್ದರು. ಅದರಂತೆ ಬುಧವಾರ ಈ ಇಬ್ಬರು ಯುವಕರು ಶಾಸ್ತ್ರೋಕ್ತವಾಗಿ ವಿಧಿವಿಧಾನದಂತೆ ತಪ್ಪು ಕಾಣಿಕೆ ನಡೆಯಿತು ಎಂದು ಮೂಲಗಳು ತಿಳಿಸಿವೆ.
ಶಾಸಕರು ಪಲ್ಲಕ್ಕಿ ಹೊತ್ತು ಸಾಗಿದ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಎಚ್ಚೆತ್ತುಕೊಂಡ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಹಿರಿಯರು ಹಾಗೂ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿಯು ನ.22ರ ರಾತ್ರಿ ಗಂಟೆ 10 ಕ್ಕೆ ದೇವಸ್ಥಾನದಲ್ಲಿ ತುರ್ತು ಸಭೆ ನಡೆಸಿತು. ಸಭೆಯಲ್ಲಿ ತೀರ್ಮಾನಿಸಿದಂತೆ ಶೂದ್ರನಿಂದ ಪಲ್ಲಕ್ಕಿ ಹೊರಿಸಲು ಕಾರಣರಾದ ಇಬ್ಬರು ಜಿ.ಎಸ್.ಬಿ ಯುವಕರನ್ನು ಕಾಶೀಮಠದ ಸ್ವಾಮಿಗಳ ಬಳಿಗೆ ಮಾರನೇ ದಿನ ಮುಂಜಾನೆ ಕರೆದೊಯ್ದರು. ಅವರ ಸೂಚನೆ ಮೇರೆಗೆ ಕ್ಷಮೆಯಾಚಿಸಲಾಗಿದೆ.
ಲಾಯಿಲ ವೆಂಕಟರಮಣ ದೇವಸ್ಥಾನದ ದೀಪೋತ್ಸವದ ನಿಮಿತ್ತ ರಾತ್ರಿ ಪೇಟೆ ಸವಾರಿ ಪಲ್ಲಕ್ಕಿ ಉತ್ಸವವು ಬೆಳ್ತಂಗಡಿ ನಗರದ ಮಧ್ಯ ಭಾಗ ತಲುಪುತ್ತಿದ್ದಂತೆ ರಾತ್ರಿ ತನ್ನೆಲ್ಲಾ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಊರಿಗೆ ತೆರಳುತ್ತಿದ್ದ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜಾರವರು ತಮ್ಮ ಕಾರಿನಿಂದಿಳಿದು ದೇವರ ಪಲ್ಲಕ್ಕಿ ಕಡೆಗೆ ತೆರಳಿ ಕೈ ಮುಗಿದು ಪ್ರಸಾದವನ್ನು ಸ್ವೀಕರಿಸಿ ತದನಂತರ ದೇವರ ಪಲ್ಲಕ್ಕಿಗೆ ಹೆಗಲನ್ನು ಕೊಟ್ಟು ತುಸು ದೂರದವರೆಗೆ ಪಲ್ಲಕ್ಕಿ ಹೊತ್ತು ನಡೆದಿದ್ದರು.





