ಪುತ್ತೂರು: ಬಿಜೆಪಿ ಕಾರ್ಯಕರ್ತನನ್ನು ಹೊರದಬ್ಬಿದ ಪುತ್ತಿಲ ಬೆಂಬಲಿಗರು: ಬಸನಗೌಡ ಪಾಟೀಲ್ ಯತ್ನಾಳ್ ಸಮ್ಮುಖದಲ್ಲೇ ಘಟನೆ
ಪುತ್ತೂರು: ಬ್ಯಾನರ್ ವಿಚಾರದಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸ್ ದೌರ್ಜನ್ಯ ನಡೆದಿರುವ ಹಿನ್ನೆಲೆಯಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪುತ್ತೂರಿನ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ್ದರು.
ಈ ವೇಳೆ ಆಸ್ಪತ್ರೆಯಲ್ಲಿ ಭಾರೀ ಹೈಡ್ರಾಮ ನಡೆದಿದೆ. ಬಿಜೆಪಿ ಕಾರ್ಯಕರ್ತನೊಬ್ಬನನ್ನು ಪಕ್ಷೇತರ ಅಭ್ಯರ್ಥಿ ಪುತ್ತಿಲ ಪರ ಕಾರ್ಯಕರ್ತರು ಹೊರದಬ್ಬಿ ಬಾಗಿಲು ಹಾಕಿದ್ದಾರೆ.
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಲ್ ಎದುರಲ್ಲೇ ಬಿಜೆಪಿ ನಾಯಕರಿಗೆ, ಕಾರ್ಯಕರ್ತರಿಗೆ ಅವಮಾನ ಆಗಿದೆ ಎನ್ನುವ ಆರೋಪ ವ್ಯಕ್ತವಾಗಿದೆ. ಆಸ್ಪತ್ರೆಯ ಒಳಗೆ ಹೋಗದಂತೆ ಬಿಜೆಪಿ ಕಾರ್ಯಕರ್ತರನ್ನು ದೂರ ಇರುವಂತೆ ಪುತ್ತಿಲ ಕಾರ್ಯಕರ್ತರು ಹೊರದಬ್ಬಿದ್ದಾರೆ.
ದೌರ್ಜನ್ಯಕ್ಕೆ ಒಳಗಾದ ಹಿಂದೂ ಕಾರ್ಯಕರ್ತರನ್ನು ಯಾವುದೇ ಕಾರಣಕ್ಕೂ ಬಿಜೆಪಿ ಕಾರ್ಯಕರ್ತರು ನೋಡಬಾರದು ಎಂದು ಪುತ್ತಿಲ ಕಾರ್ಯಕರ್ತರು ಹೇಳುತ್ತಿದ್ದಾರೆ. ಬಸರಾಜ್ ಪಾಟೀಲ್ ಯತ್ನಲ್ ಗೆ ಮಾತ್ರ ಹಿಂದೂ ಕಾರ್ಯಕರ್ತರನ್ನು ನೋಡಲು ಎಂಟ್ರಿ ನೀಡಿದ ಪುತ್ತಿಲ ಟೀಂ ಬಿಜೆಪಿ ಕಾರ್ಯಕರ್ತ ಅಜಿತ್ ರೈ ಹೊಸಮನೆ ಅವರನ್ನು ಹೊರದಬ್ಬಿದ್ದಾರೆ.
ಈ ಘಟನೆಯಿಂದ ವಿಚಲಿತರಾದ ಅಜಿತ್ ರೈ ಹೊಸಮನೆ ಅವರು ಹಿಂದು ಸಂಘಟನೆ ಕಾರ್ಯಕರ್ತರ ನಡೆಗೆ ಆಕ್ರೋಶವನ್ನೂ ಆಸ್ಪತ್ರೆಯಲ್ಲಿ ವ್ಯಕ್ತಪಡಿಸಿದ್ದಾರೆ.




