ನಾಳೆ ಬಂಟ್ವಾಳಕ್ಕೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಆಗಮನ: ವಾಹನ ಸಂಚಾರದಲ್ಲಿ ಭಾರೀ ಬದಲಾವಣೆ
ಬಂಟ್ವಾಳ: ಮೇ 6ರ ಶನಿವಾರದಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ದ.ಕ. ಜಿಲ್ಲೆಯ ಬಂಟ್ವಾಳದಲ್ಲಿ ಬೃಹತ್ ರೋಡ್ ಶೋ ನಡೆಸಲಿದ್ದು, ಈ ಸಂದರ್ಭ ರಸ್ತೆ ಸಂಚಾರಕ್ಕೆ ಅಡಚಣೆಯಾಗುವ ಸಾಧ್ಯತೆ ಇರುವುದರಿಂದ ಪರ್ಯಾಯ ಮಾರ್ಗವಾಗಿ ವಾಹನಗಳು ಸಂಚರಿಸಲು ಮಾರ್ಗ ಬದಲಾವಣೆ ಮಾಡಿ ಆದೇಶಿಸಲಾಗಿದೆ.
ಯೋಗಿ ಆದಿತ್ಯನಾಥ್ ಅವರು ಆಗಮಿಸುವ ಹೆಲಿಪ್ಯಾಡ್ ಸ್ಥಳ ಬದಲಾವಣೆಯಾಗಿದ್ದು, ಅವರು ಬಂಟ್ವಾಳ ತಾಲೂಕು ಶಾಂತ ಜಿ ಮೇಲಾಂಟ ಇವರ ಬಸ್ತಿಪಡು ಮೈದಾನದಲ್ಲಿರುವ ಹೆಲಿಪ್ಯಾಡ್ ನಲ್ಲಿ ಇಳಿಯಲಿದ್ದಾರೆ. ಮತ್ತು ಕಾರ್ಯಕ್ರಮಕ್ಕೆ ಅತ್ಯಧಿಕ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಇದೆ. ಜನ ಸಂದಣಿಯಾಗಿ ರಸ್ತೆ ಸಂಚಾರಕ್ಕೆ ಅಡಚಣೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸಂಚಾರದಲ್ಲಿ ಮಾರ್ಪಾಡು ಮಾಡಲಾಗಿದೆ. ಮಧ್ಯಾಹ್ನ 12.00 ಗಂಟೆಯಿಂದ ರಾತ್ರಿ 8.00 ಗಂಟೆಯವರೆಗೆ ಪರ್ಯಾಯ ಮಾರ್ಗವಾಗಿ ವಾಹನಗಳು ಸಂಚರಿಸಲು ಮಾರ್ಗ ಬದಲಾವಣೆ ಮಾಡಿ ಆದೇಶಿಸಲಾಗಿದೆ.
ಚಿಕ್ಕಮಗಳೂರು ಕಡೆಯಿಂದ ಮಂಗಳೂರು ಕಡೆಗೆ ಬರುವ ವಾಹನಗಳನ್ನು ಬಂಟ್ವಾಳ ತುಂಬೆ ಜಂಕ್ಷನ್(ಮೂಡಬಿದ್ರೆ ಕ್ರಾಸ್) ನಿಂದ ಸ್ವರ್ನಾಡು-ಮೂಲರಪಟ್ನ-ಸೂರಲ್ಪಾಡಿ-ಗುರುಪುರ ಕೈಕಂಬ ಮೂಲಕ ಮಂಗಳೂರು ಕಡೆಗೆ ತೆರಳುವುದು. ಮಂಗಳೂರುನಿಂದ ಬೆಂಗಳೂರು ಕಡೆಗೆ ತೆರಳುವ ವಾಹನಗಳನ್ನು ಪಂಪ್ ವೆಲ್ ನಿಂದ ತೊಕ್ಕಟ್ಟು-ಮುಡಿಸು-ಮೆಲ್ಕಾರ್- ಮಾರ್ಗದ ಮೂಲಕ ಬೆಂಗಳೂರು ಕಡೆಗೆ ಸಂಚರಿಸುವುದು ಮಂಗಳೂರುನಿಂದ ಬೆಳ್ತಂಗಡಿಗೆ ತೆರಳುವ ವಾಹನಗಳನ್ನು ಗುರುಪುರ ಕೈಕಂಬ-ಸೂರಲ್ಪಾಡಿ- ಮೂಲರಪಟ್ನ-ಸ್ವರ್ನಾಡು ಮೂಲಕ ಬೆಳ್ತಂಗಡಿಗೆ ತೆರಳುವುದು. ಬೆಂಗಳೂರು ಕಡೆಯಿಂದ ಬರುವ ವಾಹನಗಳನ್ನು ಮೆಲ್ಕಾರ್, ಮುಡಿಪು ತೊಕ್ಕೊಟ್ಟು ಮೂಲಕ ಮಂಗಳೂರಿಗೆ ತೆರಳುವುದು.
ಈ ಸಂಚಾರ ಬದಲಾವಣೆಗೆ ಸಂಬಂಧಿಸಿದಂತೆ ಪೊಲೀಸ್ ಅಧೀಕ್ಷಕರು ಆದೇಶ ಹೊರಡಿಸಿದ್ದಾರೆ.




