ಪ್ರಧಾನಿ ಮೋದಿ, ಯೋಗಿ ಆದಿತ್ಯನಾಥ ಪರಸ್ಪರ ಮಾತುಕತೆಯ ಫೋಟೋಗಳು ವೈರಲ್:
ವ್ಯತ್ಯಾಸ ಗುರುತಿಸಿ ಟ್ರೋಲ್ ಮಾಡಿದ ನೆಟ್ಟಿಗರು
ಉತ್ತರ ಪ್ರದೇಶ: ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಪರಸ್ಪರ ಮಾತುಕತೆಯಲ್ಲಿ ತೊಡಗಿರುವಂತೆ ಕಾಣುತ್ತಿರುವ ಫೋಟೋಗಳು ವೈರಲ್ ಆಗಿದ್ದು, ‘ಇದು ಫೋಟೋ ಶೂಟ್’ ಎಂದು ಪ್ರತಿಪಕ್ಷಗಳು ಹಾಗೂ ನೆಟ್ಟಿಗರು ಗುರುತಿಸಿ ಟ್ರೋಲ್ ಮಾಡಿದ್ದಾರೆ.
“ನಾವು ಪ್ರಯಾಣವನ್ನು ಪ್ರಾರಂಭಿಸಿದ್ದೇವೆ. ನಾವು ನಮ್ಮ ಸರ್ವಸ್ವವನ್ನೂ ಸಮರ್ಪಿಸಿದ್ದೇವೆ ಮತ್ತು ಹೊಸ ಭಾರತವನ್ನು ನಿರ್ಮಿಸಲು ಪ್ರತಿಜ್ಞೆ ಮಾಡಿದ್ದೇವೆ, ಆಕಾಶವನ್ನು ಮೀರಿದ ಎತ್ತರವನ್ನು ಮುಟ್ಟುವ ಹೊಸಬೆಳಕಿಗಾಗಿ…” ಎಂದು ಯೋಗಿ ಆದಿತ್ಯನಾಥ ಅವರು ಚಿತ್ರಕ್ಕೆ ಶೀರ್ಷಿಕೆ ನೀಡಿದ್ದಾರೆ.

ಕಾಂಗ್ರೆಸ್ ಪಕ್ಷದ ಮುಖಂಡರು ಚಿತ್ರದಲ್ಲಿನ ಕೆಲವು ಸಂಗತಿಗಳನ್ನು ಎತ್ತಿ ತೋರಿಸಿದ್ದಾರೆ. ಪ್ರಧಾನ ಮಂತ್ರಿಯವರು ಧರಿಸಿರುವ ಬಟ್ಟೆಯ ಒಂದು ಭಾಗವು ಎರಡು ಚಿತ್ರಗಳ ನಡುವೆ ಬದಲಾಗಿರುವುದನ್ನು ಕಾಣಬಹುದು ಎಂದಿದ್ದಾರೆ.
“ರಾಜ್ಯದ ಮುಖ್ಯಮಂತ್ರಿ ಫೋಟೋ ಹಾಕಿ ಎಲ್ಲವೂ ಸರಿಯಾಗಿದೆ ಎಂದು ಸಾಬೀತು ಮಾಡಬೇಕಾಗಿದೆ. ಒಂದು ಫೋಟೋದಲ್ಲಿ, ಮೋದಿಯವರು ಶಲ್ಯವನ್ನು ಧರಿಸಿದ್ದಾರೆ, ಒಂದರಲ್ಲಿ ಶಾಲು ಧರಿಸಿದ್ದಾರೆ…. ” ಎಂದು ಕಾಂಗ್ರೆಸ್ ಮುಖಂಡರಾದ ಸುಪ್ರಿಯಾ ಶ್ರೀನೇತ್ ವ್ಯಂಗ್ಯವಾಡಿದ್ದಾರೆ.





