ಸಾಮಾಜಿಕ ಜಾಲತಾಣದಲ್ಲಿರುವ ಹರಿದಾಡುವ ಸಂದೇಶ ಸುಳ್ಳು: ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ
ವಿಟ್ಲ: ಭಾಷಣಗಳನ್ನು ತಿರುಚುವ ಕೆಲಸ ಮಾಡುವ ಬದಲು ಜನ ಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವ ಕಾರ್ಯ ಮಾಡಬೇಕು. ಸಾಮಾಜಿಕ ಜಾಲತಾಣದಲ್ಲಿರುವ ಹರಿದಾಡುವ ಸಂದೇಶದಲ್ಲಿ ಶೇ.75ರಷ್ಟು ಸುಳ್ಳು ವಿಚಾರವಾಗಿದೆ. ಜನರು ಶಕ್ತಿ ತುಂಬಿದರೆ, ಬಡವರ ಮನೆ ಬಾಗಿಲಿಗೆ ಸರ್ಕಾರದ ಸೇವೆ ತಲುಪಿಸುವ ಕಾರ್ಯ ಮಾಡಲಾಗುವುದು. ಬಿಜೆಪಿಯಲ್ಲಿ ಭ್ರಷ್ಟಾಚಾರ ಮಾಡುವವರಿಗೆ ಬುದ್ದಿಕಲಿಸುವ ಕಾರ್ಯ ಮಾಡಿಯೇ ಸಿದ್ದ ಎಂದು ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಹೇಳಿದರು.


ಅವರು ಮಂಗಳವಾರ ಕೇಪು ಗ್ರಾಮದ ಅಡ್ಯನಡ್ಕ, ಅಳಿಕೆ ಗ್ರಾಮದ ಕಾನತ್ತಡ್ಕ, ವಿಟ್ಲ ಮುಡ್ನೂರು ಗ್ರಾಮದ ಭಾಗದಲ್ಲಿ ಕಾರ್ಯಕರ್ತರ ಸಭೆ ನಡೆಸಿ ಮಾತನಾಡಿದರು.
ಕೊಯಿಲ ಪಶು ವೈದ್ಯಕೀಯ ಕಾಲೇಜು ಇಂದು ದೂಳು ತುಂಬಿ ಸರ್ಕಾರದ ಅನುದಾನ ವ್ಯರ್ಥಗೊಳ್ಳುತ್ತಿದೆ. ಅಲ್ಲಿ ಎನಿಮಲ್ ಹಬ್ ಮೂಲಕ ಹತ್ತು ಸಾವಿರ ಜನರಿಗೆ ಉದ್ಯೋಗ ನೀಡಲು ಸಾಧ್ಯ. ಉತ್ತಮ ಚಿಂತನೆಯನ್ನು ಜನರಿಗೆ ನೀಡುವ ಮೂಲಕ ಅಭಿವೃದ್ಧಿ ಮಾಡಬಹುದು. 2200 ಮುಸ್ಲಿಂಮರಿಗೆ ಟ್ರಸ್ಟ್ ಮೂಲಕ ಮಾಡಿದ್ದೇನೆ. ಗೆದ್ದು ಬಂದ ಬಳಿಕ ಶಕುಂತಳಾ ಟಿ. ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಆಡಳಿತ ನಡೆಸಲಾಗುವುದು ಎಂದು ತಿಳಿಸಿದರು.
ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಮಾತನಾಡಿ ಪುತ್ತೂರಿಗೆ ಸಮರ್ಥ ನಾಯಕತ್ವ ಅಭ್ಯರ್ಥಿಯಾಗಿ ಕಾಂಗ್ರೆಸ್ ಪಕ್ಷ ನೀಡಿದೆ. ಜನರ ಕಷ್ಟಗಳಿಗೆ ಸ್ವಂದಿಸುವ ಮನ ಮಿಡಿಯುವ ಗುಣವನ್ನು ಮೆಚ್ಚಿ ನಾನು ಅಶೋಕ್ ಕುಮಾರ್ ರೈ ಅವರ ಪರವಾಗಿ ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಜನರು ಬಿಜೆಪಿಯ ದುರಾಡಳಿತ, ಭ್ರಷ್ಟಾಚಾರದ ಆಡಳಿತದಿಂದ ಜನರು ಬೇಸತ್ತಿದ್ದಾರ ಪುತ್ತೂರುನಲ್ಲಿ ಕಾಂಗ್ರೆಸ್ ಗೆಲ್ಲಿಸಲು ಪಣತೋಡಿ ಎಂದರು.
ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಮಾತನಾಡಿ ಪುತ್ತೂರಿನಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಜಾಗ ಕಾಯ್ದಿರಿಸುವ ಕಾರ್ಯ ಈ ಹಿಂದಿನ ಕಾಂಗ್ರೆಸ್ ಸರ್ಕಾರ ಮಾಡಿದ್ದು, ಮುಂದಿನ ದಿನದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣವನ್ನು ಕಾಂಗ್ರೆಸ್ ಸರ್ಕಾರ ಮಾಡಲಿದೆ. ನಿರಾಶ್ರಿತ ತಮಿಳರಿಗೆ ಜಾತಿ ಪ್ರಮಾಣ ಪತ್ರ ಸಮಸ್ಯೆಯನ್ನು ಪರಿಹಾರ ಮಾಡಲಾಗುವುದು. ಯುವ ಮನಸ್ಸಿನ ಅಶೋಕ್ ಕುಮಾರ್ ರೈ ಅವರಿಗೆ ಜನರ ಕೆಲಸಗಳನ್ನು ಮಾಡಿಕೊಡುವ ಸಾಮರ್ಥ್ಯವಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಮುಖಂಡ ಕಾವು ಹೇಮನಾಥ ಶೆಟ್ಟಿ ಮಾತನಾಡಿ ಕಾಂಗ್ರೆಸ್ ಎಲ್ಲರನ್ನೂ ಸಮಾನವಾಗಿ ನೋಡುವ ಕಾರ್ಯ ಮಾಡಿದೆ. ಬಿಜೆಪಿ ಅಪಪ್ರಚಾರ ಮಾಡುವುದರಲ್ಲೇ ತೊಡಗಿಕೊಂಡಿದೆ. ನಮಗೆ ಧರ್ಮ ಪಾಲನೆ ಮಾಡುವುದಕ್ಕೆ ಯಾರದ್ದೂ ಅಡ್ಡಿಯಿಲ್ಲ. ಕೃಷಿಕರ ಸ್ವಾಧೀನ ಇರುವ ಜಾಗವನ್ನು ನೀಡಲು, ಅಕ್ರಮ ಸಕ್ರಮದಲ್ಲಿ ಲಕ್ಷ ಲಕ್ಷ ಅಧಿಕಾರಿಗಳ ಮೂಲಕ ಜನರಿಂದ ಪಡೆಯಲಾಗಿದೆ. ಬಿಜೆಪಿಯ ಬ್ರಷ್ಟಾಚಾರವನ್ನು ತಡೆಯುವ ನಿಟ್ಟಿನಲ್ಲಿ ಸಮರ್ಥ ನಾಯಕತ್ವದ ಅಗತ್ಯವಿದ್ದು, ಅಶೋಕ್ ಕುಮಾರ್ ರೈ ಅವರಿಗೆ ಗರಿಷ್ಠ ಮತ ನೀಡುವ ಮೂಲಕ ಶಕ್ತಿ ತುಂಬಬೇಕು ಎಂದು ತಿಳಿಸಿದರು.
ಬಿಜೆಪಿ ಕಾರ್ಯಕರ್ತರಾದ ಆನಂದ, ಮಣಿಕಂಠ, ಬಾಲರಾಜ್, ಮನೋಹರ, ಸೂರ್ಯ, ವಸಂತ, ಅಶೋಕ್, ಶಿವರಾಜ್, ಕಾರ್ತಿಕ್ ಮತ್ತಿತರರು ಕಾಂಗ್ರೆಸ್ ಸೇರ್ಪಡೆಯಾದರು.
ಕಾಂಗ್ರೆಸ್ ಮುಖಂಡರಾದ ಡಾ. ರಾಜಾರಾಮ ಕೆ. ಬಿ., ಎಂ. ಎಸ್. ಮಹಮ್ಮದ್, ಮುರಳೀಧರ ರೈ ಮಠಂತಬೆಟ್ಟು, ಪ್ರವೀಣ್ ಚಂದ್ರ ಆಳ್ವ, ಉಮಾನಾಥ ಶೆಟ್ಟಿ, ಮಹೇಶ್ ರೈ ಅಂಕೊತ್ತಿಮಾರ್, ವೇದನಾಥ ಸುವರ್ಣ, ಅಳಿಕೆ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಸರಸ್ವತಿ, ನೂರುದ್ದೀನ್ ಸಾಲ್ಮರ, ರಮಾನಾಥ ವಿಟ್ಲ, ವಿ.ಕೆ.ಎಂ. ಅಶ್ರಫ್, ಅಬ್ದುಲ್ ರಹಿಮಾನ ಹಸೈನಾರ್ ನೆಲ್ಲಿಗುಡ್ಡೆ, ಅಬ್ದುಲ್ ಕರೀಂ ಕುದ್ದುಪದವು, ಪದ್ಮನಾಭ ಪೂಜಾರಿ ಸಣ್ಣಗುತ್ತು, ಶ್ರೀನಿವಾಸ ಶೆಟ್ಟಿ ಕೊಲ್ಯ ಮತ್ತಿತರರು ಉಪಸ್ಥಿತರಿದ್ದರು.




