ಮಡಿಕೇರಿ: ಕಣ್ಣೂರಿನಲ್ಲಿರುವ ಪಯ್ಯಂಬಲ ಕಡಲ ತೀರದಲ್ಲಿ ನಾಪತ್ತೆಯಾಗಿದ್ದ ವಿದ್ಯಾರ್ಥಿಯ ಮೃತದೇಹ ಪತ್ತೆ
ಮಡಿಕೇರಿ: ಕೇರಳದ ಕಣ್ಣೂರಿನಲ್ಲಿರುವ ಪಯ್ಯಂಬಲ ಕಡಲ ತೀರದಲ್ಲಿ ಕಣ್ಮರೆಯಾದ ತಣ್ಣೀರುಹಳ್ಳ ಗ್ರಾಮದ ಸೃಜನ್ ನ ಮೃತದೇಹ ಪತ್ತೆಯಾಗಿದೆ.
ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಮುಗಿದ ಹಿನ್ನೆಲೆ ಕುಟುಂಬದ ಸದಸ್ಯರೊಂದಿಗೆ ಕೇರಳದ ದೇವಾಲಯಗಳು ಹಾಗೂ ಪ್ರವಾಸಿತಾಣಗಳಿಗೆ ತೆರಳಿದ್ದ ಸೃಜನ್ (15) ಪಯ್ಯಾಂಬಲ ಕಡಲ ಕಿನಾರೆಯಲ್ಲಿ ಅಲೆಗಳ ಹೊಡೆತಕ್ಕೆ ಸಿಲುಕಿ ಸಮುದ್ರದಲ್ಲಿ ನಾಪತ್ತೆಯಾಗಿದ್ದ.
ಕೋಸ್ಟಲ್ ಗಾರ್ಡ್ ಸಿಬ್ಬಂದಿಗಳು, ನುರಿತ ಈಜುಗಾರರು ಕಾರ್ಯಾಚರಣೆ ಕೈಗೊಂಡಿದ್ದರು. ಸೋಮವಾರ ರಾತ್ರಿ 8.30ರ ಸುಮಾರಿಗೆ ಸೃಜನ್ ಮೃತದೇಹ ಪತ್ತೆಯಾಗಿದೆ. ಸೃಜನ್ ತಣ್ಣೀರುಹಳ್ಳ ಗ್ರಾಮದ ನಿವಾಸಿ ಶಶಿಕುಮಾರ್ (ಸಚಿನ್) ಹಾಗೂ ನೇರುಗಳಲೆ ಗ್ರಾ.ಪಂ ಸದಸ್ಯೆ ಕವಿತ ದಂಪತಿ ಪುತ್ರ.




