ಸುಳ್ಯ: ಕೋಳಿ ಪದಾರ್ಥಕ್ಕಾಗಿ ನಡೆದ ಜಗಳ: ಮಗನನ್ನು ಹತ್ಯೆ ಮಾಡಿದ ತಂದೆ
ಸುಳ್ಯ: ತಂದೆ ಮಗನನ್ನು ಕ್ಷುಲಕ ಕಾರಣಕ್ಕೆ ಕೊಲೆ ಮಾಡಿದ ಘಟನೆ ಕಳೆದ ರಾತ್ರಿ ಸುಳ್ಯ ತಾಲೂಕಿನಲ್ಲಿ ನಡೆದಿದೆ.
ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ ಏರಣಗುಡ್ಡೆ ಎಂಬಲ್ಲಿ ಶಿವರಾಮ ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.
ನಿನ್ನೆ ರಾತ್ರಿ ಮನೆಯಲ್ಲಿ ಕೋಳಿ ಪದಾರ್ಥ ಮಾಡಲಾಗಿತ್ತು. ಮಗ ಶಿವರಾಮ ರಾತ್ರಿ ಮನೆಗೆ ಬರುವಾಗ ಕೋಳಿ ಪದಾರ್ಥ ಖಾಲಿ ಆಗಿತ್ತೆನ್ನಲಾಗಿದೆ. ಈ ವೇಳೆ ಕೋಳಿ ಪದಾರ್ಥ ಖಾಲಿಯಾಯಿತು ಎಂಬ ಕಾರಣದಿಂದ ನಡೆದ ಜಗಳ ಮಾತಿಗೆ ಮಾತು ಬೆಳೆದು ತಾರಕಕ್ಕೇರಿತು. ಬಳಿಕ ಕೋಪಗೊಂಡ ತಂದೆ ಶೀನ ಮಗ ಶಿವರಾಮನ ತಲೆಗೆ ಬಡಿಗೆಯಿಂದ ಹೊಡೆದರೆನ್ನಲಾಗಿದೆ. ಶಿವರಾಮ ಅವರಿಗೆ ಏಟು ಬಲವಾಗಿ ಬಿದ್ದ ಪರಿಣಾಮ ತಲೆ ಒಡೆದು ಸ್ಥಳದಲ್ಲೇ ಕುಸಿದು ಬಿದ್ದು ಸಾವನಪ್ಪಿದ್ದಾರೆ ಎನ್ನಲಾಗಿದೆ.
ವಿಷಯ ತಿಳಿದು ಸುಬ್ರಹ್ಮಣ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಶೀನನನ್ನು ಬಂಧಿಸಿದ್ದಾರೆ.
ಶಿವರಾಮರ ಮೃತ ದೇಹವನ್ನು ಕಡಬ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.






