ಕಣ್ಣೂರು: ರೈಲಿನಲ್ಲಿ ಸಹಪ್ರಯಾಣಿಕನಿಗೆ ಬೆಂಕಿ ಹಚ್ಚಿದ ವ್ಯಕ್ತಿ: ಮೂವರು ಮೃತ್ಯು, 9 ಮಂದಿಗೆ ಗಾಯ
ಕೋಯಿಕ್ಕೋಡ್: ರೈಲಿಗೆ ಹತ್ತುವ ವಿಚಾರವಾಗಿ ನಡೆದ ಜಗಳ ಭೀಕರ ದುರಂತದಲ್ಲಿ ಅಂತ್ಯವಾಗಿದೆ. ಚಲಿಸುತ್ತಿದ್ದ ಎಕ್ಸ್‌ಪ್ರೆಸ್ ರೈಲಿನಲ್ಲಿ ವ್ಯಕ್ತಿಯೊಬ್ಬ ತನ್ನ ಸಹ ಪ್ರಯಾಣಿಕನಿಗೆ ಬೆಂಕಿ ಹಚ್ಚಿರುವ ಘಟನೆ ಕೇರಳದಲ್ಲಿ ನಡೆದಿದೆ.
ಜಗಳದ ಹಿನ್ನೆಲೆ ಅಪರಿಚಿತ ವ್ಯಕ್ತಿ ತನ್ನ ಜೊತೆ ಪ್ರಯಾಣಿಸುತ್ತಿದ್ದ ವ್ಯಕ್ತಿಗೆ ಬೆಂಕಿ ಹಚ್ಚಿದ್ದಾನೆ. ಇದರಿಂದ ಉಂಟಾದ ಕಾಲ್ತುಳಿತ ಮತ್ತು ಸುಟ್ಟ ಗಾಯಗಳಿಂದ 3 ಮಂದಿ ಸಾವನ್ನಪ್ಪಿದ್ದು, 9 ಮಂದಿ ಗಾಯಗೊಂಡಿದ್ದಾರೆ.
ಮೃತರಲ್ಲಿ ಒಂದು ವರ್ಷದ ಮಗು, ಮಹಿಳೆ ಸೇರಿದ್ದಾರೆ. ಕೇರಳದ ಎಲತ್ತೂರ್ ರೈಲು ನಿಲ್ದಾಣದ ಬಳಿ ಹಳಿಗಳ ಮೇಲೆ ಮೂವರ ಮೃತದೇಹಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲಪ್ಪುಳ – ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದೆ.
ಘಟನೆ ನಡೆದ ಕೂಡಲೇ ವ್ಯಕ್ತಿ ಪರಾರಿಯಾಗಿದ್ದು, ಪ್ರಯಾಣಿಕರು ತುರ್ತು ಸರಪಳಿ ಎಳೆದ ಬಳಿಕ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ.
ಭಾನುವಾರ ರಾತ್ರಿ 9.45 ರ ಸುಮಾರಿಗೆ, ಅಲಪ್ಪುಳ-ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್‌ಪ್ರೆಸ್ ರೈಲು ಕೋಯಿಕ್ಕೋಡ್ ಅನ್ನು ದಾಟಿ ಕಣ್ಣೂರು ಬಳಿಯ ಕೊರಾಪುಳ ರೈಲ್ವೇ ಸೇತುವೆಯನ್ನು ತಲುಪಿದಾಗ ಈ ದುರ್ಘಟನೆ ನಡೆದಿದೆ.
ಕೆಲವು ಗಂಟೆಗಳ ನಂತರ, ಎಲತ್ತೂರು ರೈಲು ನಿಲ್ದಾಣದ ಬಳಿ ಹಳಿಗಳ ಮೇಲೆ ಒಂದು ವರ್ಷದ ಮಗು ಮತ್ತು ಮಹಿಳೆ ಸೇರಿದಂತೆ ಮೂವರ ಶವಗಳು ಪತ್ತೆಯಾಗಿವೆ.





