ನೆಲ್ಯಾಡಿ: ಲಾರಿ ಹರಿದು ವೃದ್ಧ ಮೃತ್ಯು: ಪರಾರಿಯಾಗಿದ್ದ ಲಾರಿ ಉಪ್ಪಿನಂಗಡಿಯಲ್ಲಿ ಪೊಲೀಸರ ವಶಕ್ಕೆ

ನೆಲ್ಯಾಡಿ: ರಸ್ತೆ ಬದಿ ಮಲಗಿದ್ದ ವೃದ್ಧರೋರ್ವರ ಮೇಲೆ ಲಾರಿ ಹರಿದು ಆತ ಸ್ಥಳದಲ್ಲೇ ಮೃತಪಟ್ಟ ಘಟನೆ ಮುಂಜಾನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಗುಂಡ್ಯದಲ್ಲಿ ನಡೆದಿದೆ.
ಮೂಲತ: ಕೇರಳ ನಿವಾಸಿ ಪೊನ್ನಪ್ಪನ್ ಮೃತಪಟ್ಟ ದುರ್ದೈವಿ.
ಕಳೆದ ಹಲವು ವರ್ಷಗಳಿಂದ ಗುಂಡ್ಯ ಪರಿಸರದ ಅಂಗಡಿಗಳಲ್ಲಿ ಕ್ಲೀನಿಂಗ್ ಸೇರಿದಂತೆ ಸಣ್ಣಪುಟ್ಟ ಕೆಲಸ ನಿರ್ವಹಿಸಿಕೊಂಡು ಅಂಗಡಿ ಮುಂದೆ, ರಸ್ತೆ ಫುಟ್‌ಪಾತ್‌ಗಳಲ್ಲಿ ಮಲಗುತ್ತಿದ್ದರು. ಎ.1ರಂದು ರಾತ್ರಿ ಗುಂಡ್ಯ ಚೆಕ್‌ಪೋಸ್ಟ್ ಬಳಿ ರಸ್ತೆ ಪಕ್ಕ ಮಲಗಿದ್ದ ಪೊನ್ನಪ್ಪನ್‌ರವರ ಕಾಲಿನ ಮೇಲೆ ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಲಾರಿಯೊಂದು ಹಾದುಹೋಗಿ ಪರಾರಿಯಾಗಿದೆ.
ಇನ್ನು ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಪೊನ್ನಪ್ಪನ್‌ರನ್ನು ಸ್ಥಳೀಯರು ಆಸ್ಪತ್ರೆಗೆ ಕರೆತಂದರಾದರೂ ಆ ವೇಳೆಗೆ ಆತ ಮೃತಪಟ್ಟಿದ್ದ ಎಂದು ವರದಿಯಾಗಿದೆ.
ಕೂಡಲೇ ಸ್ಥಳೀಯರು ಈ ಬಗ್ಗೆ ನೆಲ್ಯಾಡಿ ಹೊರಠಾಣೆ ಪೊಲೀಸರಿಗೆ ಮಾಹಿತಿ ನೀಡಿದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಲಾರಿಯನ್ನು ಉಪ್ಪಿನಂಗಡಿಯಲ್ಲಿ ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.