ವಿಟ್ಲ: ಸರಕಾರದ ಅನುದಾನದಲ್ಲಿ ಬಿಜೆಪಿ ಮುಖಂಡರ ಜಾಗದಲ್ಲಿ ತಡೆಗೋಡೆ ನಿರ್ಮಾಣ: ಕಾಂಗ್ರೆಸ್ ಆರೋಪ
ಬಹುವರ್ಷದ ಬೇಡಿಕೆಯಾದ ವಿಟ್ಲ-ಕಬಕ ಡಾಮರೀಕರಣದಲ್ಲಿ ಕಳಪೆ
ವಿಟ್ಲ: ಚಂದಳಿಕೆಯ ಮುದೂರು ಭಾಗದಲ್ಲಿ ರಾಜಕಾಲುವೆಯನ್ನು ಮಣ್ಣು ತುಂಬಿಸಿ ಮುಚ್ಚಲಾಗಿದೆ. ಮಾರ್ಗವನ್ನು ಅತಿಕ್ರಮಣ ಮಾಡುವ ಕಾರ್ಯ ಮಾಡಲಾಗಿದೆ. ಖಾಸಗೀ ಜಾಗಕ್ಕೆ ಸಾರ್ವಜನಿಕ ಹಣದಲ್ಲಿ ಕಾಮಗಾರಿ ನಡೆಸುವ ಕಾರ್ಯ ಕಾನೂನಿಗೆ ವಿರುದ್ಧವಾದ ವಿಚಾರವಾಗಿದೆ ಎಂದು ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವಕ್ತಾರ ರಮಾನಾಥ ವಿಟ್ಲ ಹೇಳಿದರು.
ವಿಟ್ಲದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು
ಕಬಕ – ಕಂಬಳಬೆಟ್ಟು ಮಧ್ಯೆ ನಡೆಯುತ್ತಿರುವ ಡಾಂಬರು ಪ್ರಕ್ರಿಯೆ ಸೂಕ್ತ ರೀತಿಯಲ್ಲಿ ನಡೆಯುತ್ತಿಲ್ಲ. ಮಾಡಿದ ಕಾಮಗಾರಿ ಮಳೆಗಾಲದಲ್ಲಿ ನಿಲ್ಲುವುದೇ ಅನುಮಾನ ಎಂಬಂತಿದೆ. ಅಡಿಪಾಯ ಸರಿಯಾಗದೆ ಮೇಲೆ ಎಷ್ಟು ಪದರ ಹಾಕಿದರೂ ಪ್ರಯೋಜನ ಇಲ್ಲ. ಪಟ್ಟಣ ಪಂಚಾಯಿತಿಯ ಅವ್ಯವಸ್ಥೆಯ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಹಾಗೂ ಲೋಕಾಯುಕ್ತಕ್ಕೆ ದೂರು ನೀಡುವ ಕಾರ್ಯ ಮಾಡುತ್ತೇವೆ ಎಂದು ತಿಳಿಸಿದರು,
ಪಟ್ಟಣ ಪಂಚಾಯಿತಿ ಸದಸ್ಯ ವಿ.ಕೆ.ಎಂ. ಅಶ್ರಫ್ ಮಾತನಾಡಿ ನಗರೋತ್ಥಾನ ಯೋಜನೆಯ 5ಕೋಟಿಯಲ್ಲಿ 4.25ಕೋಟಿ ಕಾಮಗಾರಿಯನ್ನು ಪಟ್ಟಣ ಪಂಚಾಯಿತಿಯ 18 ವಾರ್ಡ್ ಗಳಲ್ಲಿ ಕೆಲವು ವಾರ್ಡ್ ಗೆ ಮಾತ್ರ ಇಡುವ ಮೂಲಕ ತಾರತಮ್ಯ ಮಾಡಿದ್ದಾರೆ. ಈ ಬಗ್ಗೆ ಪುತ್ತೂರು ಶಾಸಕರಿಗೆ ಮನವಿಯನ್ನು ಮಾಡಿದ್ದರೂ, ಕ್ರೀಯಾ ಯೋಜನೆಯಲ್ಲಿ ನಾವು ಸಾರ್ವಜನಿಕರಿಗೆ ಅತೀ ಅಗತ್ಯವಿದ್ದ ಕಾಮಗಾರಿಗಳನ್ನು ಸೂಚಿಸಿದ ಒಂದೇ ಒಂದು ಕಾಮಗಾರಿಗೂ ಅನುದಾನ ನೀಡಿಲ್ಲ. ಪಕ್ಷದ ಬೂತ್ ಅಧ್ಯಕ್ಷರ ಜಾಗದಲ್ಲಿ ತಡೆಗೋಡೆ ನಿರ್ಮಾಣ ಮಾಡಿತ್ತಿರುವುದು, ಖಾಸಗೀ ಜಾಗಕ್ಕೆ ರಸ್ತೆ ನಿರ್ಮಾಣ ಮಾಡುವ ಕಾರ್ಯ ಮೇಗಿನಪೇಟೆ, ನಿಡ್ಯ, ಮುದೂರು, ಕಲ್ಲಕಟ್ಟ ಸೇರಿ ವಿವಿಧ ಭಾಗದಲ್ಲಿ ಆಗಿದೆ. ಪಂಚಾಯಿತಿಗೆ ಮುಂದೆ ಸ್ವಾಧೀನಕ್ಕೆ ಸಿಗದ ಜಾಗಕ್ಕೆ ಕಾಮಗಾರಿಗಳನ್ನು ನಡೆಸುತ್ತಿದ್ದಾರೆ. ಕಲ್ಲಕಟ್ಟ ಸೇರಿ ವಿವಿಧ ಅಣೆಕಟ್ಟುಗಳನ್ನು ಕಟ್ಟದ ಕಾರಣ ಪಟ್ಟಣ ಪಂಚಾಯಿಯ ವಿವಿಧ ಭಾಗದಲ್ಲಿ ನೀರಿನ ಅಭಾವ ತಲೆದೋರಿದೆ. ನೀರಿನ ವ್ಯವಸ್ಥೆಯನ್ನು ಮಾಡುವ ಪರಿಸ್ಥಿತಿ ಇಲ್ಲದಂತಾಗಿದೆ. ಮಾಡುವ ಬಗ್ಗೆ ಭರವಸೆಯನ್ನು ನೀಡಲಾಗುತ್ತಿದೆ ಹೊರತು ಯಾವುದೂ ಕಾರ್ಯ ರೂಪಕ್ಕೆ ಬರುತ್ತಿಲ್ಲ ಎಂದು ಆರೋಪಿಸಿದರು.
ವಿಟ್ಲ ನಗರ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ ಶೆಟ್ಟಿ ಕೊಲ್ಯ, ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಕುರುಂಬಳ ಉಪಸ್ಥಿತರಿದ್ದರು.




