ಡಿಸೆಂಬರ್ ತಿಂಗಳೊಳಗೆ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವಂತೆ ಹೈಕೋರ್ಟ್ ನಿರ್ದೇಶನ
ಬೆಂಗಳೂರು: ಡಿಸೆಂಬರ್ ತಿಂಗಳೊಳಗೆ 56 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವಂತೆ ಕರ್ನಾಟಕ ರಾಜ್ಯ ಸರ್ಕಾರ, ಚುನಾವಣಾ ಆಯೋಗಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. ನವೆಂಬರ್ 26ರ ಒಳಗೆ ಮೀಸಲಾತಿ ಒದಗಿಸಲು ಹೈಕೋರ್ಟ್ ಆದೇಶ ನೀಡಿದೆ. ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ಈ ಬಗ್ಗೆ ಇಂದು (ನವೆಂಬರ್ 17) ಸೂಚನೆ ಕೊಟ್ಟಿದೆ.
ಡಿಸೆಂಬರ್ 30ರ ಒಳಗೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸಲು ಆದೇಶ ನೀಡಲಾಗಿದೆ. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಳಂಬ ಹಿನ್ನೆಲೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಹಾಜರಾಗಿದ್ದಾರೆ. ನವೆಂಬರ್ 26ರ ಒಳಗೆ ಮೀಸಲಾತಿ ಅಧಿಸೂಚನೆ ಹೊರಡಿಸುತ್ತೇವೆ ಎಂದು ಕರ್ನಾಟಕ ಹೈಕೋರ್ಟ್ ಗೆ ರಾಜ್ಯ ಸರ್ಕಾರ ಹೇಳಿಕೆ ನೀಡಿದೆ.
ನವೆಂಬರ್ 26ರ ಒಳಗೆ ಮೀಸಲಾತಿ ನೀಡಿದರೆ ಶೀಘ್ರ ಚುನಾವಣೆ ನಡೆಸಲಾಗುವುದು. ಡಿಸೆಂಬರ್ ಅಂತ್ಯದೊಳಗೆ ಚುನಾವಣೆ ನಡೆಸಲಾಗುವುದು ಎಂದು ಚುನಾವಣಾ ಆಯೋಗದ ಪರ ವಕೀಲ ಕೆ.ಎನ. ಫಣೀಂದ್ರ ಹೇಳಿಕೆ ನೀಡಿದ್ದಾರೆ. ಹೇಳಿಕೆ ದಾಖಲಿಸಿಕೊಂಡು ಹೈಕೋರ್ಟ್ ನಿರ್ದೇಶನ ನೀಡಿದೆ.





