ವಿಟ್ಲ: ಪಾಂಡವರ ಕೋಟೆ ಬಳಿ ಅಕ್ರಮ ಕೋರೆ ಎಂಬ ವಿಚಾರ:
ಈ ಭಾಗದಲ್ಲಿ ಪಾಂಡವರ ಕೋಟೆ ಇದೆ ಎಂಬುದು ಶುದ್ಧ ಸುಳ್ಳು ಸುದ್ದಿ
ವಿಟ್ಲ: ಅಳಿಕೆ ಗ್ರಾಮದ ಕೋಟೆತ್ತಡ್ಕದಲ್ಲಿ ನಡೆಯುತ್ತಿರುವ ಕೆಂಪು ಕಲ್ಲು ಗಣಿಗಾರಿಕೆಯ ಸಂಪೂರ್ಣ ಸಕ್ರಮವಾಗಿದ್ದು, ಗಣಿಗಾರಿಕೆ ನಡೆಸುವ ಜಾಗ ಸಂಪೂರ್ಣ ವರ್ಗ ಜಮೀನಾಗಿದೆ. ಅದನ್ನು ಲೀಸ್ ಗೆ ಪಡೆದು ಸಂಬಂಧಪಟ್ಟ ಇಲಾಖೆಯಿಂದ ಪರವಾನಗಿ ಪಡೆದು ಕಲ್ಲು ತೆಗೆಯಲಾಗುತ್ತಿದೆ. ಈ ಭಾಗದಲ್ಲಿ ಪಾಂಡವರ ಕೋಟೆಯಿಲ್ಲ, ಪಾಂಡವರ ಒಲೆಯ ಕುರುಹು ಇದ್ದು, ಆ ಸ್ಥಳವನ್ನು ಸಂರಕ್ಷಣೆ ಮಾಡಲಾಗಿದೆ ಎಂದು ಕೊಟೆತ್ತಡ್ಕ ಕೆಂಪು ಕಲ್ಲು ಕ್ವಾರಿ ಮಾಲೀಕ ರಂಜಿತ್ ಕುಮಾರ್ ಹೇಳಿದ್ದಾರೆ.
ವಿಟ್ಲದಲ್ಲಿ ಕರೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅಳಿಕೆ ಗ್ರಾಮದ 281/6ರಲ್ಲಿ 4.16ಎಕ್ರೆ ಜಮೀನು ಅಬ್ದುಲ್ ರಹಿಮಾನ್ ಎಂಬವರಿಗೆ ಸೇರಿದ್ದಾಗಿದ್ದು, ಗಣಿಗಾರಿಕೆಗೆ ಪಡೆದ ಎಲ್ಲಾ ಇಲಾಖೆಯ ಪರವಾನಿಗೆಗಳು ಅವರ ಹೆಸರಿನಲ್ಲೇ ಇದೆ. ಅದನ್ನು ಕಾನೂನು ಬದ್ದವಾಗಿ ಲೀಸ್ ಮೂಲಕ ನಾವು ಪಡೆದುಕೊಂಡು ಕೆಲಸ ನಿರ್ವಹಿಸುತ್ತಿದ್ದೇವೆ. ಇದಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯೂ ವರ್ಗ ಜಾಗದಲ್ಲಿ ಹೋಗುತ್ತಿರುವುದರಿಂದ ಅದಕ್ಕೆ ಗೇಟು ಅಳವಡಿಸಲಾಗಿದೆ. ಕಾನೂನು ಬದ್ಧವಾಗಿ ಗಣಿಗಾರಿಕೆ ನಡೆಯುತ್ತಿರುವುದರಿಂದ ಯಾರೊಬ್ಬರಿಗೂ ಹಫ್ತಾ ಕೂಡಾ ನೀಡುತ್ತಿಲ್ಲ ಎಂದು ವಿಟ್ಲ ಪ್ರೆಸ್ ಕ್ಲಬ್ ನಲ್ಲಿ ದಾಖಲೆಗಳ ಸಹಿತ ತಿಳಿಸಿದರು.
ಬಿ.ಜೆ.ಪಿ. ಕಾರ್ಯಕರ್ತ ರಾಜೇಶ್ ಮಣಿಯಾಣಿ ಮಾತನಾಡಿ ಎರಡು ವರ್ಷದ ಹಿಂದೆ ನಡೆಯುತ್ತಿದ್ದ ಗಣಿಗಾರಿಕೆಯ ಬಗ್ಗೆ ಇಲಾಖೆಯವರು ಕ್ರಮ ಕೈಗೊಳ್ಳದಿದ್ದಾಗ, ಪ್ರತಿಭಟನೆ ನಡೆಸಿ, ಬಿಜೆಪಿ ಮುಖಂಡರು ಹಾಗೂ ಸಾರ್ವಜನಿಕರು ಸೇರಿ ಮನವಿ ನೀಡಿದ ಚಿತ್ರ ಹಾಗೂ ಹಳೆಯ ಛಾಯಾಚಿತ್ರಗಳನ್ನು ಕೆಲವು ವ್ಯಕ್ತಿಗಳು ಸಾಮಾಜಿಕ ಜಾಲತಾಣದಲ್ಲಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಶಾಸಕರ ಬಗ್ಗೆ ನಿಂಧಿಸಿ, ಚುನಾವಣಾ ಬಹಿಷ್ಕಾರವನ್ನು ಹಾಕಿರುತ್ತಾರೆ. ಆದರೆ ಅಲ್ಲಿ ಶಾಸಕರಿಗಾಗಲೀ ಪಕ್ಷಕ್ಕಾಗಲೀ ಸಮಸ್ಯೆಯುಂಟು ಮಾಡುವ ಕಾರ್ಯವಾಗಿಲ್ಲ ಎಂದು ತಿಳಿಸಿದರು. ಕೊಟೆತ್ತಡ್ಕ ಕೆಂಪು ಕಲ್ಲು ಕ್ವಾರಿ ಮಾಲೀಕ ಚಂದ್ರಹಾಸ ಶೆಟ್ಟಿ ಹಾಜರಿದ್ದರು.