ಕಾರ್ಕಳ: 14 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಗಳಿಬ್ಬರ ಸೆರೆ
ಕಾರ್ಕಳ: ಹದಿನಾಲ್ಕು ವರ್ಷಗಳ ಹಿಂದೆ ವ್ಯಕ್ತಿಯೋರ್ವನನ್ನು ಅಪಹರಿಸಿ, ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಕಾರ್ಕಳ ನಗರ ಠಾಣೆ ಪೊಲೀಸರು ಹೊಳೆನರಸೀಪುರದಲ್ಲಿ ಬಂಧಿಸಿದ್ದಾರೆ.
2007ರ ಅಕ್ಟೋಬರ್ 14 ರಂದು ಕಾರ್ಕಳ ತಾಲೂಕು ಹಿರ್ಗಾನ ಗ್ರಾಮದ ಮೂರೂರು ಪೋಸ್ಟ್ ಆಫೀಸ್ ಬಳಿ ಆರೋಪಿಗಳಾದ ಯೋಗೀಶ ಮತ್ತು ಮಂಜುನಾಥ್ ಕಾರ್ಕಳ ಹಾರ್ಜಡ್ಡು- ಕುಕ್ಕುಂದೂರು ಗ್ರಾಮದ ವೆಂಕಟೇಶ ಎಂಬವರನ್ನು ಅಪಹರಿಸಿದ್ದರು. ಬಳಿಕ ಆರೋಪಿ ಯೋಗೀಶನ ಮನೆಯಲ್ಲಿ ಅಕ್ರಮ ಬಂಧನದಲ್ಲಿಟ್ಟು, ಹೊಡೆದು ಗಾಯಗೊಳಿಸಿದ್ದರು. ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದೀಗ ಆರೋಪಿಗಳನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇನ್ನುಳಿದ ಆರೋಪಿ ವಸಂತ ಎಂಬಾತ ಪ್ರಕರಣ ದಾಖಲಾದ ದಿನದಿಂದಲೂ ಅರೆಸ್ಟ್ ಆಗದೆ ತಲೆಮರೆಸಿದ್ದು, ನ್ಯಾಯಾಲಯ ಆರೋಪಿಯ ಬಂಧನಕ್ಕೆ ವಾರಂಟ್ ಹೊರಡಿಸಿದೆ.





