ಪೊಲೀಸರ ಮೇಲೆ ಹಲ್ಲೆ ಪ್ರಕರಣ: ಕಾಂಗ್ರೆಸ್ ಶಾಸಕನ ಬಂಧನ
ನವದೆಹಲಿ: ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೈದ ಪ್ರಕರಣದಲ್ಲಿ ಕಾಂಗ್ರೆಸ್ ಮಾಜಿ ಶಾಸಕ ಅಸಿಫ್ ಮೊಹಮ್ಮದ್ ಖಾನ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ರಾಜ್ಯ ಚುನಾವಣಾ ಆಯೋಗದ ಅನುಮತಿರಹಿತವಾಗಿ ಶಾಹೀನ್ ತೈಯ್ಯಬ್ ಮಸೀದಿ ಮುಂಭಾಗದಲ್ಲಿ ಸುಮಾರು 30 ಮಂದಿಯನ್ನು ಸೇರಿಸಿಕೊಂಡು ಸಭೆ ನಡೆಸಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ಪೊಲೀಸರ ಮೇಲೆ ಅವರು ಹಲ್ಲೆ ನಡೆಸಿದ್ದರು. ಅಲ್ಲದೆ ಅವಾಚ್ಯ ಶಬ್ದಗಳಿಂದ ಪೊಲೀಸರನ್ನು ಅವಮಾನಿಸಿದ್ದರು ಎಂದು ದೂರಲಾಗಿದೆ. ಈ ಹಲ್ಲೆ ಸಂದರ್ಭದಲ್ಲಿ ಅಸಿಫ್ ಖಾನ್ ಪುತ್ರ, ದೆಹಲಿ ಮಹಾನಗರ ಪಾಲಿಕೆ ಕಾಂಗ್ರೆಸ್ ಅಭ್ಯರ್ಥಿ ಅರಿಬಾ ಖಾನ್ ಮೈಕ್ ಬಳಸಿಕೊಂಡು ಭಾಷಣ ಮಾಡುತ್ತಿದ್ದ. ಆತನ ಬೆಂಬಲಿಗರೂ ಸೇರಿದ್ದರು ಎಂದು ಪೊಲೀಸರು ದೂರಿನಲ್ಲಿ ಉಲ್ಲೇಖಿಸಿದ್ದರು.
ಇನ್ನು ಈ ವಿಚಾರವನ್ನು ಗಸ್ತು ತಿರುಗುತ್ತಿದ್ದ ಪೊಲೀಸರು ಅಧಿಕಾರಿಗಳಿಗೆ ತಿಳಿಸಿದ್ದು, ಕೂಡಲೇ ಸಬ್ ಇನ್ಸ್‌ಪೆಕ್ಟರ್ ಅಕ್ಷಯ್ ಅವರು ಸ್ಥಳಕ್ಕಾಗಮಿಸಿ ಅನುಮತಿರಹಿತವಾಗಿ ಸಭೆ ನಡೆಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಆಗ ಆಸಿಫ್ ಖಾನ್ ಅಕ್ಷಯ್ ಅವರಿಗೆ ಅವಾಚ್ಯವಾಗಿ ನಿಂದಿಸಿ ಅನುಚಿತ ವರ್ತನೆ ತೋರಿ ಹಲ್ಲೆ ನಡೆಸಿದ್ದರು ಎಂದು ಡೆಪ್ಯುಟಿ ಪೊಲೀಸ್ ಕಮಿಷನರ್ ಈಶಾ ಪಾಂಡೆ ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.