November 22, 2024

ಉಡುಪಿ: ಹೊಸ ಯಕ್ಷಗಾನ ಪ್ರದರ್ಶನಗಳ ಅನಧಿಕೃತ ಚಿತ್ರೀಕರಣವನ್ನು ನಿರ್ಬಂಧ, ತಪ್ಪಿತಸ್ಥರ ವಿರುದ್ಧ ಸೂಕ್ತಕ್ರಮದ ಎಚ್ಚರಿಕೆ

0

ಉಡುಪಿ: ಬಡಗುತಿಟ್ಟಿನ ಶ್ರೀಅನಂತ ಪದ್ಮನಾಭ ಯಕ್ಷಗಾನ ಮಂಡಳಿ ಈ ವರ್ಷ ಪ್ರದರ್ಶಿಸುವ ಹೊಸ ಯಕ್ಷಗಾನ ಪ್ರದರ್ಶನಗಳ ಅನಧಿಕೃತ ಚಿತ್ರೀಕರಣವನ್ನು ನಿರ್ಬಂಧಿಸಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತಕ್ರಮದ ಎಚ್ಚರಿಕೆ ನೀಡಿದೆ.

ಇದುವರೆಗೆ ಸಿನಿಮಾ, ನಾಟಕ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದ್ದ ಕೃತಿಸ್ವಾಮ್ಯ ಕಾಯ್ದೆಯನ್ನು ಇದೀಗ ಯಕ್ಷಗಾನ ಪ್ರದರ್ಶನಕ್ಕೂ ಅನ್ವಯವಾಗುವಂತೆ ಜಾರಿಗೊಳಿಸಲಾಗುತ್ತಿದೆ. ಬಡಗುತಿಟ್ಟಿನ ಡೇರೆ ಮೇಳವಾದ ಪೆರ್ಡೂರು ಮೇಳ ಈಗಾಗಲೇ ಈ ವರ್ಷದ ತನ್ನ ತಿರುಗಾಟವನ್ನು ಪ್ರಾರಂಭಿಸಿದೆ.

ಪೆರ್ಡೂರು ಮೇಳ ಈ ವರ್ಷ ಪ್ರೊ.ಪವನ್ ಕಿರಣ್‌ಕೆರೆ ಅವರ ‘ಪಾವನ ತುಳಸಿ’ ಎಂಬ ಹೊಸ ಯಕ್ಷಗಾನ ಪ್ರಸಂಗವನ್ನು ಪ್ರದರ್ಶಿಸುತಿದ್ದು, ಇದರ ಪ್ರಥಮ ಪ್ರದರ್ಶನ ಇಂದು ಹೆರಂಜಾಲು ದೇವಸ್ಥಾನದಲ್ಲಿ ನಡೆದಿದೆ.

ಇದನ್ನು ಅನಧಿಕೃತವಾಗಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡದಂತೆ ಮುಂಜಾಗ್ರತಾ ಕ್ರಮವಾಗಿ ಇದನ್ನು ಶಿಕ್ಷಾರ್ಹ ಅಪರಾಧವನ್ನಾಗಿ ಮಾಡಲಾಗಿದೆ.ಇದಕ್ಕೆ ಸಂಬಂಧಿಸಿದಂತೆ ಪೆರ್ಡೂರು ಮೇಳದ ವತಿಯಿಂದ ಕರಪತ್ರ ವೊಂದನ್ನು ವ್ಯಾಪಕವಾಗಿ ಹರಿಯಬಿಡಲಾಗಿದೆ.

ಇದರಲ್ಲಿ ‘ನಮ್ಮ ಮಂಡಳಿಯ ಪ್ರದರ್ಶನಗಳ ವೀಡಿಯೋ ರೆಕಾರ್ಡ ಮಾಡುವಂತಿಲ್ಲ. ಕೃತಿ ಸ್ವಾಮ್ಯ ಕಾಯ್ದೆ 1957 ಸೆಕ್ಷನ್ 63ರ ಅಡಿಯಲ್ಲಿ ನಮ್ಮ ಪ್ರದರ್ಶನದ ಅನಧಿಕೃತ ವೀಡಿಯೋ ರೆಕಾರ್ಡಿಂಗ್, ಯೂಟ್ಯೂಬ್, ಫೇಸ್‌ಬುಕ್, ವಾಟ್ಸಪ್ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಎಚ್ಚರಿಸಲಾಗಿದೆ.‘

ಈ ಶಿಕ್ಷೆಯು ಆರು ತಿಂಗಳಿನಿಂದ ಒಂದು ವರ್ಷದವರೆಗೆ ಕಠಿಣ ಕಾರಾಗೃಹ ಶಿಕ್ಷೆ ಅಥವಾ 50,000ರೂ.ನಿಂದ 1,00,000ರೂ.ವರೆಗೆ ದಂಡವನ್ನು ಒಳಗೊಂಡಿರುತ್ತದೆ’ ಎಂದು ಕರಪತ್ರದಲ್ಲಿ ಎಚ್ಚರಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!