ಬಿಸಿಸಿಐ ನೂತನ ಅಧ್ಯಕ್ಷರಾಗಿ ಕರ್ನಾಟಕ ಮೂಲದ ರೋಜರ್ ಬಿನ್ನಿ ಆಯ್ಕೆ

ದೆಹಲಿ: 1983ರ ವಿಶ್ವ ಕಪ್ ವಿಜೇತ ತಂಡದ ಭಾಗವಾಗಿದ್ದ ಕರ್ನಾಟಕ ಮೂಲದ ಕ್ರಿಕೆಟಿಗ ರೋಜರ್ ಬಿನ್ನಿ ಅವರು ಭಾರತೀಯ ಕ್ರಿಕೆಟ್ ಮಂಡಳಿ(ಬಿಸಿಸಿಐ)ಯ ಅಧ್ಯಕ್ಷರಾಗಿ ಅವಿರೋಧವಾಗಿ ಮಂಗಳವಾರ ಆಯ್ಕೆಯಾಗಿದ್ದಾರೆ. ಇವರು ಬಿಸಿಸಿಐಗೆ 36ನೇ ಅಧ್ಯಕ್ಷರು.
ಇದರೊಂದಿಗೆ 3 ವರ್ಷಗಳ ಕಾಲ ಆಡಳಿತ ನಡೆಸಿದ ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಆಡಳಿತ ಅಂತ್ಯವಾಗಿದೆ. ಇವರ ಉತ್ತಾರಾಧಿಕಾರಿಯಾಗಿ 67 ವರ್ಷದ ರೋಜರ್ ಬಿನ್ನಿ ಆಯ್ಕೆಯಾಗಿದ್ದಾರೆ.
1979 ರಿಂದ 1987ರವರೆಗೆ ರೋಜರ್ ಬಿನ್ನಿ ಭಾರತ ತಂಡದಲ್ಲಿ 27 ಟೆಸ್ಟ್ ಮತ್ತು 72 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 2019ರಿಂದ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ.
1983ರಲ್ಲಿ ಕಪಿಲ್ ದೇವ್ ನೇತೃತ್ವದಲ್ಲಿ ಭಾರತ ತಂಡ ವಿಶ್ವಕಪ್ ಗೆದ್ದಾಗ ರೋಜರ್ ಬಿನ್ನಿ ತಂಡದ ಭಾಗವಾಗಿದ್ದರು. ರೋಜರ್ ಬಿನ್ನಿ ಟೂರ್ನಿಯಲ್ಲಿ 8 ಪಂದ್ಯಗಳಿಂದ 18 ವಿಕೆಟ್ ಪಡೆದಿದ್ದರು.
ಇನ್ನು ಜಯ್ ಶಾ ನಿರೀಕ್ಷೆಯಂತೆ ಕಾರ್ಯದರ್ಶಿಯಾಗಿ ಮುಂದುವರೆಯಲಿದ್ದಾರೆ. 2019ರಿಂದೂ ಜಯ್ ಶಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ.