ಉಳ್ಳಾಲ: ಪೊಲೀಸ್ ವಾಹನಕ್ಕೆ ಅಪರಿಚಿತ ವಾಹನ ಡಿಕ್ಕಿ:
ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣಾ ಸಿಬ್ಬಂದಿ ಗಂಭೀರ
ಉಳ್ಳಾಲ: ವಾಹನಗಳನ್ನು ತಪಾಸಣೆ ನಡೆಸುತ್ತಿದ್ದ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಪೇದೆಗೆ ಅಪರಿಚಿತ ಕಾರು ಢಿಕ್ಕಿ ಹೊಡೆದು, ಅವರು ತಲೆಗೆ ಗಾಯಗೊಂಡಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಉಳ್ಳಾಲಬೈಲ್ ರಸ್ತೆಯಲ್ಲಿ ಇಂದು ಸಂಜೆ ಸಂಭವಿಸಿದೆ.
ಶಿವಮೊಗ್ಗ ನಿವಾಸಿ ಲೋಕೇಶ್ (೩೫) ಗಾಯಾಳು ಪೇದೆ. ಮಂಗಳೂರು ದಕ್ಷಿಣ ಸಂಚಾರಿ ಠಣೆಯ ಹೈವೇ ಪ್ಯಾಟ್ರಲ್ ವಾಹನದಲ್ಲಿ ಚಾಲಕನಾಗಿದ್ದ ಇವರು ಉಳ್ಳಾಲಬೈಲ್ ಬಳಿ ತಪಾಸಣೆಗೈಯ್ಯುತ್ತಿದ್ದ ವೇಳೆ ಘಟನೆ ನಡೆದಿದೆ. ತೊಕ್ಕೊಟ್ಟು ಕಡೆಯಿಂದ ಉಳ್ಳಾಲ ಕಡೆಗೆ ಬರುತ್ತಿದ್ದ ಬಿಳಿ ಬಣ್ಣದ ಸ್ವಿಫ್ಟ್ ಕಾರನ್ನು ತಡೆಯಲು ಯತ್ನಿಸಿದಾಗ, ಚಾಲಕ ಕಾರನ್ನು ನಿಲ್ಲಿಸದೇ ಪೇದೆ ಲೋಕೇಶ್ ಗೆ ಗುದ್ದಿ ಪರಾರಿಯಾಗಿದ್ದಾನೆ. ಢಿಕ್ಕಿ ಹೊಡೆದ ರಭಸಕ್ಕೆ ಲೋಕೇಶ್ ಅವರ ತಲೆ ರಸ್ತೆಯ ವಿಭಾಜಗಕ್ಕೆ ಬಡಿದು ರಕ್ತಸ್ರಾವ ಉಂಟಾಗಿದೆ. ತಕ್ಷಣ ಅವರನ್ನು ಮಂಗಳೂರಿನ ಎ.ಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳುರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಹಿಟ್ ಆಂಡ್ ರನ್ ಪ್ರಕರಣ ದಾಖಲಾಗಿದೆ. ಘಟನೆ ನಡೆದ ಭಾಗದ ಸಿಸಿಟಿವಿಗಳನ್ನು ಪರಿಶೀಲಿಸಲಾಗುತ್ತಿದೆ. ಶೇ.೯೦ ರಷ್ಟು ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದು ತಲೆಗೆ ಗಾಯವಾಗಿರುವುದರಿಂದ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ವೀಕ್ಷಣೆಯಲ್ಲಿ ಇರಿಸಲಾಗಿದೆ ಎಂದು ಠಾಣಾಧಿಕಾರಿ ರಮೇಶ್ ಹಾನಾಪುರ್ ತಿಳಿಸಿದ್ದಾರೆ.