ಪ್ರಿಯಕರನ ಜೊತೆ ಸೇರಿ ತನ್ನ ಪತಿಯನ್ನೇ ಕೊಲೆ ಮಾಡಿದ ಪತ್ನಿ
ಬೆಳಗಾವಿ: ಪ್ರಿಯಕರನ ಜೊತೆ ಸೇರಿಕೊಂಡ ತನ್ನ ಗಂಡನನ್ನು ಪತ್ನಿಯೇಕೊಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಟಕೋಳ ಗ್ರಾಮದ ಪಾಂಡಪ್ಪ ಜಟಕನ್ನವರ(35) ಮೃತ ವ್ಯಕ್ತಿ. ಈತನ ಪತ್ನಿ ಲಕ್ಷ್ಮಿ ಜಟಕನ್ನವರ ಹೊಸೂರ ಗ್ರಾಮದ ರಮೇಶ್ ಬಡಿಗೇರ ಜೊತೆಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಇದೇ ಕಾರಣಕ್ಕೆ ಆಗಾಗ ಗಂಡ, ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು. ಕಳೆದ ರಾತ್ರಿ ಪಾಂಡಪ್ಪ ಹಾಗೂ ಲಕ್ಷ್ಮೀ ನಡುವೆ ಇದೇ ವಿಷಯಕ್ಕೆ ಜಗಳವಾಡಿದ್ದು, ಈ ವಿಷಯ ರಮೇಶ್(36)ಗೆ ಲಕ್ಷ್ಮಿ ತಿಳಿಸಿ, ಬಳಿಕ ಗಂಡನನ್ನು ಕೊಲೆ ಮಾಡಲು ತಂತ್ರ ರೂಪಿಸಿದ್ದಾಳೆ.
ಈ ಪ್ರಕಾರವಾಗಿಯೇ ರಮೇಶ್ ಬಡಿಗೇರ ಲಕ್ಷ್ಮಿ ಮನೆಗೆ ಬಂದಿದ್ದ. ಈ ವೇಳೆ ರಮೇಶ್ ಹಾಗೂ ಪಾಂಡಪ್ಪ ಮಧ್ಯೆ ನಡೆದಿದ್ದ ಜಗಳ ವಿಕೋಪಕ್ಕೆ ತಿರುಗಿತ್ತು. ಆಗ ಪಾಂಡಪ್ಪನ ತಲೆಗೆ ಲಕ್ಷ್ಮಿ ಕೃಷಿ ಉಪಕರಣದಿಂದ ಹೊಡೆದಿದ್ದಾಳೆ.
ಇದರಿಂದಾಗಿ ಪಾಂಡಪ್ಪನ ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದು, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇದಾದ ಬಳಿಕ ಲಕ್ಷ್ಮಿ ತನ್ನ ಪ್ರಿಯಕರನ ಜೊತೆ ಸೇರಿ ಪಾಂಡಪ್ಪ ಜಕ್ಕನವರ ಶವವನ್ನು ಬೈಕ್ ಮೇಲೆ ಹೊತ್ತೊಯ್ದು, ರಾಮದುರ್ಗ ತಾಲೂಕಿನ ಹೊಸೂರು ಹೊರವಲಯದ ಕಿರು ಸೇತುವೆ ಬಳಿ ಎಸೆಯಲಾಗಿತ್ತು.




