ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ವೈರಲ್:
ಮತ್ತೊಂದು ಸುಮೋಟೋ ಪ್ರಕರಣ ದಾಖಲು
ಮಂಗಳೂರು: ಜಿಲ್ಲೆಯಲ್ಲಿ ಸರಣಿ ಕೊಲೆ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಸುಳ್ಳು ಸುದ್ದಿಗಳು ವೈರಲ್ ಆಗುತ್ತಿದೆ. ಈ ಮಧ್ಯೆ ಆಗಾಗ ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ನೀಡುತ್ತಿದ್ದರೂ ಕೆಲವರು ಸುಳ್ಳು ಸುದ್ದಿ ವೈರಲ್ ಮಾಡುತ್ತಿದ್ದಾರೆ. ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಉರ್ವಾ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಸುಮೋಟೋ ಪ್ರಕರಣ ದಾಖಲಾಗಿದೆ.
ಪ್ರಕರಣದ ವಿವರ:
“ಬ್ರೇಕಿಂಗ್ ನ್ಯೂಸ್, ಸುರತ್ಕಲ್ ಚೊಕ್ಕಬೆಟ್ಟು ಮುಸ್ಲಿಂ ಯುವಕರಿಂದ ಕರ್ತವ್ಯ ನಿರತ ಪೊಲೀಸ್ ಹಾಗೂ ಪೊಲೀಸ್ ಅಧಿಕಾರಿಗಳ ಮೇಲೆ ಕಲ್ಲುತೂರಾಟ” ಎಂಬುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದು ಮೆಸೇಜ್ ಅನ್ನು ವೈರಲ್ ಮಾಡಿದ್ದಾರೆ. ಈ ಪ್ರಕರಣ ಸಂಬಂಧ 505(1)(ಬಿ), 153(ಎ)ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
ನಿನ್ನೆ ಐದು ಪ್ರಕರಣ ದಾಖಲು:
ನಿನ್ನೆ (ಜು.31) ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದಿರುವ ಸರಣಿ ಹತ್ಯೆಗೆ ಸಂಬಂಧಪಟ್ಟಂತೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಾಗೂ ಕಾಮೆಂಟ್ ಮಾಡಿದ ಬಗ್ಗೆ ಐದು ಪ್ರಕರಣ ಮಂಗಳೂರು ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.




