March 26, 2026

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂವರ ಹತ್ಯಾ ಪ್ರಕರಣ: ಆರೋಪಿಗಳು ಯಾವುದೇ ಸಂಘಟನೆಯವರಾಗಿದ್ದರೂ ನಿರ್ದಾಕ್ಷಿಣ್ಯ ಕ್ರಮ: ಡಿಜಿಪಿ ಪ್ರವೀಣ್ ಸೂದ್

0
image_editor_output_image377182974-1659341811654.jpg

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಮೂರು ಹತ್ಯೆಗಳಲ್ಲಿ ಭಾಗಿಯಾದ ಆರೋಪಿಗಳು ಯಾವುದೇ ಸಂಘಟನೆಯವರಾಗಿರಲಿ, ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ. ಯಾವುದೇ ವ್ಯಕ್ತಿ, ಸಂಘಟನೆ, ಸಿದ್ದಾಂತದವರು ಈ ಕೃತ್ಯಗಳ ಹಿಂದಿದ್ದರೂ ಬಿಡುವುದಿಲ್ಲ ಎಂದು ಡಿಜಿಪಿ ಪ್ರವೀಣ್ ಸೂದ್ ಸ್ಪಷ್ಟಪಡಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಹತ್ಯೆಗಳ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಅವರು ಇಲ್ಲಿ ಸುದ್ದಿಗಾರರ ಜೊತೆ ಮಾತನಾಡಿದರು.

ಯಾವುದೇ ಕೊಲೆ ನಡೆದರೂ ಸತ್ತವರು ಹಿಂದೂಗಳೊ, ಮುಸ್ಲಿಮರೋ ಅಥವಾ ಕ್ರೈಸ್ತರೊ ಎಂದು ನೋಡುವುದಿಲ್ಲ. ಅದನ್ನು ನಡೆಸಿದವರ ಧರ್ಮವನ್ನೂ ನೋಡುವುದಿಲ್ಲ ಎಂದರು. ‘ಮೂರು ಪ್ರಕರಣಗಳ ಆರೋಪಿಗಳನ್ನು ಬಂಧನ ಮಾಡುತ್ತೇವೆ ಅದರಲ್ಲಿ ಯಾರು ಭಾಗಿಯಾದರೂ ಅವರನ್ನು ಬಂಧಿಸಿ ಕ್ರಮ ತೆಗೆದುಕೊಳ್ಳುತ್ತೇವೆ. ಆರೋಪಿಗಳ ಶೀಘ್ರ ಬಂಧನವಾಗುವ ನಿರೀಕ್ಷೆ ಇದೆ’ ಎಂದರು.

‘ಅಪರಾಧದ ಕುರಿತು ಮಾಹಿತಿ ಇದ್ದವರು ಪೊಲೀಸರ ಜೊತೆ ಹಂಚಿಕೊಳ್ಳಬಹುದು. ಮಾಹಿತಿ ಗೊತ್ತಿದ್ದೂ ಪೊಲೀಸರ ಜೊತೆ ಹಂಚಿಕೊಳ್ಳದಿದ್ದರೇ ಅವರ ಕೈವಾಡವೂ ಇದೆ ಎಂದು ಭಾವಿಸಬೇಕಾಗುತ್ತದೆ’ ಎಂದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 3 ಕೊಲೆ ಪ್ರಕರಣ ಆಗಿದೆ. ಮಸೂದ್ ಕೊಲೆ ಪ್ರಕರಣದಲ್ಲಿ 8 ಮಂದಿಯನ್ನು ಬಂಧಿಸಲಾಗಿದೆ.‌ ಪ್ರವೀಣ್ ಕೊಲೆ ಪ್ರಕರಣದಲ್ಲಿ ಇಬ್ಬರ ಬಂಧನವಾಗಿದೆ. ಫಾಝಿಲ್ ಪ್ರಕರಣದಲ್ಲಿ ಒಬ್ಬರನ್ನು ಬಂಧಿಸಲಾಗಿದ್ದು, ಅವರು ನೀಡಿದ ಸುಳಿವು ಇತರ ಅಪರಾಧಿಗಳ ಪತ್ತೆಗೆ ನೆರವಾಗಲಿದೆ ಎಂದರು.

Leave a Reply

Your email address will not be published. Required fields are marked *

error: Content is protected !!